ಲಿಂಗಾಯತ ಧರ್ಮ ಮಾನ್ಯತೆಗೆ ಕ್ರಮಕೈಗೊಳ್ಳಿ

KannadaprabhaNewsNetwork |  
Published : Jul 23, 2025, 01:59 AM IST
ಮಹಿಳಾ ವಿವಿಯಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸಬೇಕು: ಡಾ.ಶಶಿಕಾಂತ ಪಟ್ಟಣ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಲಿಂಗಾಯತ ಧರ್ಮ ಮಾನ್ಯತೆಗಾಗಿ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲಿಂಗಾಯತ ಧರ್ಮ ಮಾನ್ಯತೆಗಾಗಿ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹೇಳಿದರು.

ನಗರದಲ್ಲಿ ಬಸವ ಸಂಘಟನೆಗಳ ಸಂಯುಂಕ್ತಾಶ್ರಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕೇವಲ ಸಾಂಸ್ಕ್ರತಿಕ ನಾಯಕ ಎಂದು ಘೋಷಿಸಿ, ಎಲ್ಲ ಕಚೇರಿಗಳಲ್ಲಿ ಫೋಟೊ ಇದ್ದರೆ ಉಪಯೋಗವಿಲ್ಲ. ರಾಜ್ಯದ ಏಕೈಕ ಮಹಿಳಾ ವಿವಿಯಾಗಿರುವ ವಿಜಯಪುರದ ರಾಜ್ಯ ಮಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಿ, ವಚನಗಳ ಸಂಶೋಧನೆ, ಪರಿಷ್ಕರಣೆ, ಅಧ್ಯಯನ ಕೆಲಸ ಆಗಬೇಕಿದೆ. ಪೀಠಕ್ಕೆ ಹೇರಳವಾಗಿ ಅನುದಾನ ನೀಡಿ, ಬಸವಣ್ಣ ಮತ್ತು ಶರಣ ಸಾಹಿತ್ಯದ ಸಂಶೋಧನೆ, ಪರಿಷ್ಕರಣೆ, ಪ್ರಕಟಣೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅಷ್ಟೆ ಅಲ್ಲದೆ ರಾಜ್ಯ ಸರ್ಕಾರ ರಾಜ್ಯದ ವಿವಿಗಳಲ್ಲಿಯೂ ಸಹ ಬಸವ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಖಾಲಿ ಇರುವ ಎಲ್ಲ ವಿವಿಗಳಲ್ಲಿನ ಹುದ್ದೆಗಳ ಭರ್ತಿ ಮಾಡಬೇಕು ಎಂದರು.

ಮಹಿಳಾ ವಿವಿಯ ಎದುರಿಗಿರುವ ಅಕ್ಕಮಹಾದೇವಿಯವರ ಅರೆಬೆತ್ತಲೆ ಪ್ರತಿಮೆಯನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಶುಭ್ರವಾದ ಸೀರೆಯನ್ನುಟ್ಟ ಅಕ್ಕಮಹಾದೇವಿ ಅವರ ಮೂರ್ತಿ ಇಡಬೇಕು. ಇದಕ್ಕಾಗಿ ಸರ್ಕಾರ ತಜ್ಞರ ಸಮಿತಿ ರಚಿಸಿ ಮೂರು ತಿಂಗಳೊಳಗೆ ಈಗಿರುವ ಅಕ್ಕಮಹಾದೇವಿಯ ಅರೆಬೆತ್ತಲೆ ಪ್ರತಿಮೆ ತೆರವಾಗಿಸಿ ಬೇರೆ ಬಟ್ಟೆಯಿರುವ ಪ್ರತಿಮೆ ಇಡುವಂತಾಗಬೇಕು ಎಂದು ಒತ್ತಾಯಿಸಿದರು.

ವಿಜಯಪುರ ಜಿಲ್ಲೆಯಲ್ಲಿ 50 ರಿಂದ 60 ಶರಣರು ಹುಟ್ಟಿದ್ದರೂ, ಜಿಲ್ಲೆಯಲ್ಲಿ ಯಾವುದೇ ಜನವಸತಿ ಬಡಾವಣೆಗಳಿಗೆ ಶರಣರ ಹೆಸರನ್ನಿಟ್ಟಿಲ್ಲ. ಬಸವಣ್ಣನವರ ಕಲ್ಯಾಣ ಕ್ರಾಂತಿಯ ಜಿಲ್ಲೆಯಲ್ಲಿ ಬಡಾವಣೆಗಳಿಗೆ ಶರಣರ ಹೆಸರು ಇಡಬೇಕು. ಇದಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಆಡಳಿತ ಮಂಡಳಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇನ್ನು ರಾಜ್ಯ ಸರ್ಕಾರ ಜಿಲ್ಲೆಯಲ್ಲಿರುವ ಅನೇಕ ಶರಣರಿಗೆ ಸ್ಮಾರಕಗಳನ್ನು‌ ನಿರ್ಮಿಸಬೇಕು, ಈಗಿರುವ ಹಲವು ಶರಣರ ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕು. ಡಾ.ಫ.ಗು.ಹಳಕಟ್ಟಿ ಅವರು ಜಗತ್ತಿಗೆ ವಚನ ಸಾಹಿತ್ಯ ಪರಿಚಯಿಸಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಮೀಸಲಿಟ್ಟು, ಪ್ರಚುರಪಡಿಸುವ ಕೆಲಸ ಆಗಬೇಕು. ಇದಕ್ಕೆ ಸಚಿವ ಎಂ.ಬಿ.ಪಾಟೀಲರು ಸಹ ಮನಸ್ಸು ಮಾಡಬೇಕು. ಈ ಹಿಂದೆ ಎತ್ತಲಾಗಿದ್ದ ಪ್ರತ್ಯೇಕ ಧರ್ಮದ ಕೂಗನ್ನು ಸ್ಮರಿಸಿಕೊಂಡು, ಲಿಂಗಾಯತ ಧರ್ಮಕ್ಕೆ ಪ್ರತ್ಯೇಕವಾಗಿ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕು. ವಿಜಯಪುರ ಜಿಲ್ಲೆ ವಿಶ್ವಗುರು ಬಸವಣ್ಣನವರು ಜನಿಸಿದ ನಾಡಾಗಿರುವುದರಿಂದ ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಎಂದು ಯಾಕೆ ನಾಮಕರಣ ಮಾಡಬಾರದು?. ಈ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಎಂದು ಹೆಸರು ಇಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರತ್ನಕ್ಕ ಬಿರಾದಾರ, ಡಾ.ಸರಸ್ವತಿ ಪಾಟೀಲ, ವಿ.ಸಿ‌.ನಾಗಠಾಣ, ಜಂಬುನಾಥ ಕಂಚ್ಯಾಣಿ, ಸಿದ್ದಪ್ಪ ಪಡ್ನಾಡ, ಶಾರದಾಮಣಿ ಹುಣಶ್ಯಾಳ, ಆರ್‌.ಎಸ್‌.ಬಿರಾದಾರ ಸೇರಿದಂತೆ ನೀಲಮ್ಮನ ಬಳಗ, ಶರಣ ಸಾಹಿತ್ಯ ಪರಿಷತ್ತು, ಇತರೆ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ