ರಾಮನಗರ: ಲೋಕಾಯುಕ್ತ ಕಚೇರಿಯಿಂದ ಜಿಲ್ಲೆಯಲ್ಲಿ ಕೈಗೊಂಡ ಸಾರ್ವಜನಿಕರ ಕುಂದುಕೊರತೆಗಳ ಹಾಗೂ ದೂರುಗಳ ವಿಚಾರಣೆ ಯಶಸ್ವಿಯಾಗಿ ನಡೆದು ಸ್ಥಳದಲ್ಲಿಯೇ 81 ದೂರುಗಳನ್ನು ಇತ್ಯರ್ತ ಪಡಿಸಲಾಗಿದೆ ಎಂದು ರಾಜ್ಯದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣಿಂದ್ರ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತರಿಂದ ಕುಂದುಕೊರತೆ, ದೂರುಗಳ ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರು ಮತ್ತು ಎದುರುದಾರರ ವಿಚಾರಣೆ ಸಭೆಯಲ್ಲಿ ಮಾತನಾಡಿದರು.ಲೋಕಾಯುಕ್ತ ಸಂಸ್ಥೆಯಿಂದ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕರ ಕುಂದುಕೊರತೆಗಳ, ದೂರುಗಳ ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರು ಮತ್ತು ಎದುರುದಾರರ ವಿಚಾರಣೆಯನ್ನು ಕೈಗೊಂಡಿದ್ದು, ಸುಮಾರು 170 ಪ್ರಕರಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವುಗಳಲ್ಲಿ ಶೇ.70ರಷ್ಟು ಪ್ರಕರಣಗಳು ವಿಲೇವಾರಿಯಾಗಿವೆ. ಸ್ಥಳದಲ್ಲಿಯೇ 81 ಪ್ರಕರಣಗಳು ಸ್ಥಳದಲ್ಲಿಯೇ ಇತ್ಯರ್ಥವಾಗಿವೆ ಎಂದರು.
ಸಾರ್ವಜನಿಕ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಾರ್ವಜನಿರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು, ಸ್ಪಂದಿಸದೇ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸಿ ಲೋಕಾಯುಕ್ತಕ್ಕೆ ದೂರು ನೀಡಿದ ನಂತರವೇ ಕಾರ್ಯಪ್ರವೃತ್ತವಾಗುವ ಉದಾಸೀನ ಮನೋಭಾವವನ್ನು ಬಿಡಬೇಕು ಎಂದರು.ಲೋಕಾಯಕ್ತರಿಗೆ ಯಾರೇ ದೂರು ನೀಡಿದರೂ ಅದಕ್ಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತದೆ. ಕೆಲಸ ಮಾಡದೇ ಇರುವುದು, ವಿಳಂಬ ಮಾಡುವುದು ಕರ್ತವ್ಯ ಲೋಪವಾಗುತ್ತದೆ. ಸರ್ಕಾರಿ ಕಚೇರಿಗೆ ಯಾವುದೇ ಅರ್ಜಿ ಸಲ್ಲಿಕೆಯಾದಲ್ಲಿ ಅದನ್ನು ಪರಿಗಣಿಸಿ ಅಥವಾ ವಜಾ ಆದರೂ ಮಾಡಿ. ಆದರೆ, ಅದನ್ನ ಹಾಗೇ ಇರಿಸಿಕೊಂಡು ಕಾಲಕಳೆಯಬಾರದು ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಮೊದಲು ಲೋಕಾಯುಕ್ತ ಕಾಯ್ದೆಯನ್ನು ಓದಿಕೊಳ್ಳಬೇಕು. ಅದರಲ್ಲಿ ಕರ್ತವ್ಯ ಲೋಪ, ದುರಾಡಳಿತವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂದು ತಿಳಿಯಬೇಕು. ಶೇ.1ರಷ್ಟಿರುವ ಸರ್ಕಾರಿ ನೌಕರರೇ ರಾಜ್ಯದ ಜನರ ಜೀವನವನ್ನು ಉತ್ತಮಗೊಳಿಸಲು ಶ್ರಮೀಸಬೇಕೆಂದರು.ಸಮಸ್ಯೆ, ಅಹವಾಲು ಇತ್ಯರ್ಥಕ್ಕೆ ಬಂದ ದೂರುದಾರರು, ಎದುರುದಾರರಿಗೆ ಕಾನೂನಿನ ತಿಳಿವಳಿಕೆ ಮೂಡಿಸಿ ಯಾರಿಗೂ ಅಸಮಧಾನವಾಗುವಂತಹ ತೀರ್ಮಾನ ಕೈಗೊಂಡಿಲ್ಲ. ಎಲ್ಲರೂ ಸಮಾಧಾನ ತರುವ ತೀರ್ಪನ್ನು ನೀಡಲಾಗಿದೆ ಎಂದರು.
ಈ ವೇಳೆ ಸಿವಿಲ್ ನ್ಯಾಯಾಧೀಶರು ಹಾಗೂ ಉಪ ಲೋಕಾಯುಕ್ತದ ಸಹ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಎಸ್ಪಿ ಶ್ರೀನಿವಾಸ್ ಗೌಡ, ಲೋಕಾಯುಕ್ತ ಎಸ್ಪಿ ಸ್ನೇಹ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ.ಸುರೇಶ್ ಇದ್ದರು.ಇದೇ ವೇಳೆ ರಾಜ್ಯ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣಿಂದ್ರ ಗೈರು ಹಾಜರಾಗಿದ್ದ ಅಹವಾಲು ಸಲ್ಲಿಸಿದವರನ್ನು ಮೊಬೈಲ್ ನಲ್ಲಿಯೇ ಸಂಪರ್ಕಿಸಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದರು.
10ಕೆಆರ್ ಎಂಎನ್ 9ರಾಮನಗರ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತರಿಂದ ಕುಂದುಕೊರತೆಗಳ, ದೂರುಗಳ ವಿಚಾರಣೆ ಸಭೆ ನಡೆಯಿತು.