ಕನ್ನಡಪ್ರಭ ವಾರ್ತೆ ಪುತ್ತೂರು
ಯುವ ಜನರನ್ನು ಮತಗಟ್ಟೆಯತ್ತ ಸೆಳೆಯಲು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ, ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ಮಕ್ಕಳಿಂದ ನಗರದ ಸಂತೆ ಇನ್ನಿತರ ಕಡೆಗಳಲ್ಲಿ ಬೀದಿ ನಾಟಕ, ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ, ಸಾಮಾಜಿಕ ಜಾಲತಾಣಗಳಲ್ಲಿ ಅರಿವು, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಕೆ, ಮನೆ ಮನೆಗಳಿಗೆ ಚುನಾವಣಾ ಆಯೋಗದ ಮತದಾರರ ಮಾರ್ಗಸೂಚಿ ಹಂಚಿಕೆ, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದ ಪ್ರದೇಶಗಳಲ್ಲಿ ಹೆಚ್ಚು ಜನ ಜಾಗೃತಿ ಕಾರ್ಯಕ್ರಮಗಳು ವಿವಿಧ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಪುತ್ತೂರು ತಾಲೂಕು ಸ್ವೀಪ್ ಸಮಿತಿ ಹಮ್ಮಿಕೊಂಡಿತ್ತು.
ಮತದಾರರ ಸಾಕ್ಷರ ಸಂಘ: ಚುನಾವಣೆಯ ಬಗ್ಗೆ ಅರಿವು ಅತೀ ಹೆಚ್ಚು ಅಗತ್ಯವಿರುವುದು ಯುವ ಮತದಾರರಿಗೆ. ಅಲ್ಲದೆ ಹೆಚ್ಚಿನ ಮತದಾರರು ಯುವ ಮತದಾರರು. ಇದನ್ನು ಮನಗಂಡು ಪ್ರತಿಯೊಂದು ಕಾಲೇಜಿನಲ್ಲಿಯೂ ಮತದಾರರ ಸಾಕ್ಷರತಾ ಸಂಘವನ್ನು ಸ್ಥಾಪಿಸಲಾಗಿತ್ತು. ಈ ಸಂಘಗಳಿಗೆ ಕಾಲೇಜುಗಳ ನುರಿತ ಉಪನ್ಯಾಸಕರು ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ಅಲ್ಲದೆ ಚುನಾವಣಾ ಪಟ್ಟಿಯಲ್ಲಿ ಹೆಸರ ನೋಂದಣಿ ಮಾಡುವ ಬಗ್ಗೆಯೂ ವಿದ್ಯಾರ್ಥಿಗಳಿಗೆ ಇಲ್ಲಿ ಮಾಹಿತಿ ನೀಡಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಲಾಗುತ್ತಿತ್ತು. ಪುತ್ತೂರಿನ ವಿವಿಧ ಕಾಲೇಜುಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ, ಮತದಾನದ ಮಹತ್ವಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಅವರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿತ್ತು. ವಿದ್ಯಾರ್ಥಿ ನಿಲಯಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗಿತ್ತು. ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ವಿವಿಧ ಕಡೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಬೀದಿ ನಾಟಕಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿತ್ತು.ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.