ಅಂಬಾನಿ, ಅದಾನಿಗೆ ಸಾವಿರಾರು ಕೋಟಿ- ಬಡವರು, ರೈತರಿಗೆ ಬಿಜೆಪಿ ಚೊಂಬು: ಕೃಷ್ಣ ಬೈರೇಗೌಡ

ದೇಶದ ಶೇ. 10ರಷ್ಚು ಜನರಲ್ಲಿ ಮಾತ್ರ ಶೇ. 40ರಷ್ಟು ಸಂಪತ್ತು ಇದೆ. ಇನ್ನು ಶೇ. 90ರಷ್ಟು ಜನರಲ್ಲಿ ಶೇ. 10ರಷ್ಟು ಮಾತ್ರ ಸಂಪತ್ತು ಇದೆ. ಇದನ್ನೇ ಪ್ರಶ್ನೆ ಮಾಡಿದರೆ ಬಿಜೆಪಿಯವರು ಉರಿದುಬೀಳುತ್ತಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

KannadaprabhaNewsNetwork | Published : Apr 27, 2024 7:50 PM IST

ಕೊಪ್ಪಳ: ದೇಶದ ಸಂಪತ್ತು ಹಂಚಿಕೆಯಾಗಬೇಕು ಎಂದರೆ ಉರಿದು ಬೀಳುವ ಬಿಜೆಪಿಯವರು ಅಂಬಾನಿ, ಅದಾನಿ ಅವರಿಗೆ ಸಾವಿರಾರು ಕೋಟಿ ರುಪಾಯಿ ನೀಡುತ್ತಾರೆ. ಆದರೆ, ಬಡವರು, ರೈತರಿಗೆ ಮಾತ್ರ ಚೊಂಬು ನೀಡುತ್ತಾರೆ. ಇಂಥ ಬಿಜೆಪಿಯನ್ನು ಸೋಲಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದ್ದಾರೆ.

ಸಮೀಪದ ಭಾಗ್ಯನಗರದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಚೊಂಬು ಹಿಡಿದೇ ಭಾಷಣ ಮಾಡುತ್ತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಶೇ. 10ರಷ್ಚು ಜನರಲ್ಲಿ ಮಾತ್ರ ಶೇ. 40ರಷ್ಟು ಸಂಪತ್ತು ಇದೆ. ಇನ್ನು ಶೇ. 90ರಷ್ಟು ಜನರಲ್ಲಿ ಶೇ. 10ರಷ್ಟು ಮಾತ್ರ ಸಂಪತ್ತು ಇದೆ. ಇದನ್ನೇ ಪ್ರಶ್ನೆ ಮಾಡಿದರೆ ಅವರಿಗೆ ಸಂಕಟವಾಗುತ್ತದೆ. ಬಡವರ ಪರವಾಗಿ ಧ್ವನಿ ಎತ್ತಿದರೆ ಅವರು ಉರಿದುಬೀಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡವರಿಗೆ ಹಣ ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ. ಅದುವೇ ಶ್ರೀಮಂತರ ಸಾಲಮನ್ನಾ ಮಾಡಿದರೆ ದೇಶಕ್ಕೆ ಏನೂ ಆಗುವುದಿಲ್ಲ. ಅದು ಅಭಿವೃದ್ಧಿ ಎನ್ನುತ್ತಾರೆ. ದೇಶದಲ್ಲಿ ಶೇ. 66ರಷ್ಟು ರೈತರು ಇದ್ದಾರೆ. ಅವರ ಒಟ್ಟು ಸಾಲ ₹3 ಲಕ್ಷ ಕೋಟಿ. ಅದನ್ನು ಮನ್ನಾ ಮಾಡಿದರೆ ದೇಶ ದಿವಾಳಿಯಾಗುತ್ತದೆ ಎನ್ನುತ್ತಾರೆ. ಆದರೆ, ಶ್ರೀಮಂತರ ₹20 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಹಾಗಾದರೆ ಅವರಿಗೆ ಯಾರ ಮೇಲೆ ಕಾಳಜಿ ಇದೆ ಎಂದು ಪ್ರಶ್ನೆ ಮಾಡಿದರು.

ಬರ ಪರಿಹಾರಕ್ಕಾಗಿ ಕೈಮುಗಿದರೂ ಪರಿಹಾರ ನೀಡಲಿಲ್ಲ. ಕೇಂದ್ರಕ್ಕೆ ಹೋಗಿ ಮನವಿ ಕೊಟ್ಟು ಬಂದರೂ ಪರಿಹಾರ ನೀಡಲಿಲ್ಲ. ಅನಿವಾರ್ಯವಾಗಿ ಕೋರ್ಟ್‌ ಮೊರೆ ಹೋಗಬೇಕಾಯಿತು. ಈಗ ಕೋರ್ಟ್ ಆದೇಶ ಮಾಡಿದ್ದರಿಂದ ಪರಿಹಾರ ನೀಡಿದ್ದಾರೆ. ಅದೂ ಕೇಳಿದಷ್ಟು ಕೊಟ್ಟಿಲ್ಲ. ₹18 ಸಾವಿರ ಕೋಟಿ ಬರ ಪರಿಹಾರ ಕೇಳಿದರೆ ಕೇವಲ ₹3 ಸಾವಿರ ಕೋಟಿ ನೀಡಿದ್ದಾರೆ. ಇಷ್ಟಕ್ಕೇ ನಾವು ಸುಮ್ಮನೆ ಬಿಡುವುದಿಲ್ಲ, ಹೋರಾಟ ಮಾಡುತ್ತೇವೆ ಎಂದರು.

ಮಹಿಳೆಯರು ಧರ್ಮಸ್ಥಳ ಸೇರಿದಂತೆ ಇನ್ನಿತರ ಪುಣ್ಯಕ್ಷೇತ್ರಗಳಿಗೆ ಹೋದರೆ ದಾರಿ ತಪ್ಪುತ್ತಾರೆ ಎಂದು ಹೇಳುತ್ತಾರೆ. ಮಹಿಳೆಯರಿಗೆ ನೀಡುವ ಹಣವನ್ನು ಶಿಕ್ಷಣಕ್ಕಾಗಿ ಬಳಕೆ ಮಾಡಿಕೊಂಡರೆ ಹೊಟ್ಟೆಕಿಚ್ಚು, ಇದ್ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂದಿದ್ದು ಅನುಕೂಲ: ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ಗೆ ಬಂದಿದ್ದರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರ ಅಭಿವೃದ್ಧಿ ಕಾರ್ಯಗಳು ಒಳಗೊಂಡು ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಎಸ್.ಬಿ. ನಾಗರಳ್ಳಿ, ಜುಲ್ಲು ಖಾದ್ರಿ, ಶಾಂತಣ್ಣ ಮುದಗಲ್, ಶ್ರೀನಿವಾಸ ಗುಪ್ತಾ, ಅಮರೇಶ ಕರಡಿ, ಕೃಷ್ಣ ಇಟ್ಟಂಗಿ, ಯಮನಪ್ಪ ಕಬ್ಬೇರ, ಕಾಟನ್ ಪಾಶಾ, ಶಿವರಡ್ಡಿ ಭೂಮಕ್ಕನವರ, ಮುತ್ತು ಕುಷ್ಟಗಿ, ಗುರುರಾಜ ಹಲಿಗೇರಿ ಮೊದಲಾದವರು ಇದ್ದರು.

Share this article