ಕನ್ನಡಪ್ರಭ ವಾರ್ತೆ ಬೆಂಗಳೂರು

ಹೋಟೆಲ್‌ಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಮಂಗಳವಾರ ವಾಣಿಜ್ಯ ಬಳಕೆಯ ಅನಿಲ ಲಿಂಡರ್‌ ಸರಬರಾಜಾಗಿದ್ದು ಪರಿಸ್ಥಿತಿ ಒಂದಷ್ಟು ಸುಧಾರಿಸಿದೆ. ಆದರೆ ಪರಿಸ್ಥಿತಿ ಯಥಾಸ್ಥಿತಿಗೆ ಬಾರದಿರುವುದರಿಂದ ಹೋಟೆಲ್‌ ಉದ್ಯಮದ ಸಂಕಷ್ಟ ಮುಂದುವರಿದಿದೆ.

ಹೋಟೆಲ್‌ಗಳಲ್ಲಿ ಸೌದೆ ಒಲೆ, ಇಂಡಕ್ಷನ್‌ ಸೇರಿದಂತೆ ಪರ್ಯಾಯ ಮಾರ್ಗಗಳ ಬಳಕೆ ಮುಂದುವರಿದಿದ್ದು, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಹೋಟೆಲ್‌ ಬಂದ್‌ ಮಾಡಿ ಸಿಬ್ಬಂದಿಗೆ ರಜೆ ನೀಡಿದರೆ ಹೇಗೆ ಎಂದೂ ಕೆಲ ಮಾಲೀಕರು ಚಿಂತನೆ ನಡೆಸಿದ್ದಾರೆ. ಸಿಲಿಂಡರ್‌ ಅಭಾವದಿಂದ ಅಲ್ಲಲ್ಲಿ ಕೆಲ ಹೋಟೆಲ್‌ಗಳು ಬಾಗಿಲು ಮುಚ್ಚುವುದೂ ಮುಂದುವರಿದಿದೆ.

ಅಡುಗೆ ಅನಿಲ ಸಿಲಿಂಡರ್‌ ಸರಬರಾಜಾಗದೆ ಚಾಮರಾಜಪೇಟೆಯ ‘ಕನ್ನಡ ತಿಂಡಿ’ ಹೋಟೆಲ್‌ ಅನ್ನು ಮಂಗಳವಾರ ಬಂದ್‌ ಮಾಡಲಾಯಿತು. ಈ ಬಗ್ಗೆ ಹೋಟೆಲ್‌ ಮಾಲೀಕ ರಾಮಚಂದ್ರ ಅವರು ಬೋರ್ಡ್‌ ಹಾಕಿದ್ದು, ಗ್ರಾಹಕರು ಸಹರಿಸಬೇಕು ಎಂದು ಕೋರಿದ್ದಾರೆ. ಕಡಿಮೆ ದರಕ್ಕೆ ತಿಂಡಿ ವಿತರಿಸುವ ಜೊತೆಗೆ ದಿನವೂ 30 ಬಡವರಿಗೆ ಉಚಿತ ತಿಂಡಿ ವಿತರಿಸುವುದರಿಂದ ಈ ಹೋಟೆಲ್‌ ಹೆಸರುವಾಸಿಯಾಗಿದೆ.

ಪೋಸ್ಟರ್‌ಗಳ ಮೂಲಕ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದೂ ಇಲ್ಲಿನ ವಿಶೇಷವಾಗಿದೆ. ‘ಗ್ಯಾಸ್‌ ಸಿಲಿಂಡರ್‌ ಸಮಸ್ಯೆ ಬಗೆಹರಿಯುವವರೆಗೂ ಹೋಟೆಲ್‌ ಬಂದ್‌ ಮಾಡಲಾಗುತ್ತದೆ. ಬೇರೆ ಆಯ್ಕೆಗಳಿಲ್ಲ’ ಎಂದು ರಾಮಚಂದ್ರ ಸ್ಪಷ್ಟಪಡಿಸಿದ್ದಾರೆ.


ಸಾವಿರ ಸಿಲಿಂಡರ್‌ ಸಾಕಾಗಲ್ಲ

‘ಹೋಟೆಲ್‌ಗಳಿಗೆ ದಿನವೂ ಒಂದು ಸಾವಿರ ಸಿಲಿಂಡರ್‌ ಸರಬರಾಜು ಮಾಡಲಾಗುವುದು ಎಂದು ನೀಡಿದ್ದ ಭರವಸೆಯಂತೆ ಅಲ್ಲಲ್ಲಿ ಸಿಲಿಂಡರ್‌ ಸರಬರಾಜು ಮಾಡಲಾಗಿದೆ. ಆದರೆ ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿದ್ದು ಒಂದು ಸಾವಿರ ಸಿಲಿಂಡರ್‌ ಯಾವ ಮೂಲೆಗೂ ಸಾಕಾಗುವುದಿಲ್ಲ’ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಉಂಟಾಗುವ ಸಂಭವ ಇರಲಿಲ್ಲ. ಆದ್ದರಿಂದ ನಾವು ಹೈಕೋರ್ಟ್‌ಗೆ ಮನವಿ ಮಾಡಿದ್ದು ಗ್ಯಾಸ್‌ ಸಂಗ್ರಹ ಹಾಗೂ ವಿತರಣೆ ಬಗ್ಗೆ ಸೋಮವಾರ ಮಾಹಿತಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ’ ಎಂದು ಅವರು ವಿವರಿಸಿದ್ದಾರೆ.ಸಚಿವರ ವಿರುದ್ಧ ಆಕ್ರೋಶ

ಪಿಜಿಗಳಿಗೆ ಸಿಲಿಂಡರ್‌ ಹಂಚಿಕೆಯಲ್ಲಿ ಅನ್ಯಾಯವಾಗಿದ್ದು ಸರಿಪಡಿಸಬೇಕು ಎಂದು ಮನವಿ ಸಲ್ಲಿಸಲು ಆಗಮಿಸಿದ್ದ ಪಿಜಿ ಅಸೋಸಿಯೇಷನ್‌ ಪದಾಧಿಕಾರಿಗಳನ್ನು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅಪಮಾನಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಿಜಿ ಅಸೋಸಿಯೇಷನ್‌ ಅಧ್ಯಕ್ಷ ಅರುಣ್‌ಕುಮಾರ್‌, ನಗರದಲ್ಲಿ 12 ಸಾವಿರಕ್ಕೂ ಅಧಿಕ ಪಿಜಿಗಳಿವೆ. ನಮಗೆ ದಿನಕ್ಕೆ ಕನಿಷ್ಟವೆಂದರೂ 2 ರಿಂದ 3 ಸಾವಿರ ಸಿಲಿಂಡರ್‌ ಬೇಕು. ಆದರೆ ಸಿಲಿಂಡರ್‌ಗಳನ್ನು ಹಂಚಿಕೆ ಮಾಡುವಾಗ ಪಿಜಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದರಿಂದ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನವಿ ಸಲ್ಲಿಸಲು ಆಹಾರ ಸಚಿವರ ಮನೆ ಬಾಗಿಲಿಗೆ ಬಂದರೂ ಮಾತನಾಡಲಿಲ್ಲ. ನಮ್ಮ ಮನವಿ ಪಡೆಯುವುದಕ್ಕೂ ತಾತ್ಸರ ಮಾಡಿದರು. ಬಳಿಕ ಮನವಿ ಪಡೆದು ಕಚೇರಿಗೆ ಬನ್ನಿ ಎಂದು ಹೇಳಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.