ಜಗತ್ತಿನಲ್ಲಿ ಶಾಂತಿ ಬೇಕು, ಯುದ್ಧ ಬೇಡ, ಅಲಿಪ್ತ ನೀತಿಯ ಭಾಗವಾಗಿ ಹಲವ ರಾಷ್ಟ್ರಗಳ ಜೊತೆ ಸೌಹಾರ್ದ ಸಂಬಂಧವನ್ನು ಹೊಂದಿ ಉತ್ತಮ ಬಾಂಧವ್ಯ ಮೂಡಿಸಿಕೊಂಡು ಬರಲಾಗಿತ್ತು. ಅದಕ್ಕೆ ಪ್ರಧಾನಿ ಮೋದಿ ಅವರು ತಿಲಾಂಜಲಿ ಇಟ್ಟು ಯುದ್ಧದಾಹಿ ಟ್ರಂಪ್ ಅವರ ಗೆಳೆತನ ಮಾಡಿದ ಪರಿಣಾಮ ತೈಲ ಉತ್ಪನ್ನ ಖರೀದಿಗೆ ದುಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಿಲಿಂಡರ್ ವಿಚಾರದಲ್ಲಿ ಆಗುತ್ತಿರುವ ಗೊಂದಲ ನಿವಾರಿಸುವಂತೆ ಆಗ್ರಹಿಸಿ ಹಾಗೂ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಪಟ್ಣಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಆಗಮಿಸಿ ಸೌದೆ ಒಲೆಯನ್ನು ನಿರ್ಮಿಸಿ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಭರತ್‌ರಾಜ್ ಮಾತನಾಡಿ, ಸಿಲಿಂಡರ್ ಬೆಲೆ ಹೆಚ್ಚಳ ಮಾಡುವ ಮೂಲಕ ಅಭಾವ ನಿಯಂತ್ರಿಸಲು ವಿಫಲರಾಗಿದ್ದಾರೆ. ಐದು ರಾಜ್ಯಗಳ ಚುನಾವಣೆ ನಂತರ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡಲು ಮೋದಿ ಸರ್ಕಾರ ತಯಾರಿ ನಡೆಸಿದೆ ಎಂದು ಕಿಡಿಕಾರಿದರು.ಜಗತ್ತಿನಲ್ಲಿ ಶಾಂತಿ ಬೇಕು, ಯುದ್ಧ ಬೇಡ, ಅಲಿಪ್ತ ನೀತಿಯ ಭಾಗವಾಗಿ ಹಲವ ರಾಷ್ಟ್ರಗಳ ಜೊತೆ ಸೌಹಾರ್ದ ಸಂಬಂಧವನ್ನು ಹೊಂದಿ ಉತ್ತಮ ಬಾಂಧವ್ಯ ಮೂಡಿಸಿಕೊಂಡು ಬರಲಾಗಿತ್ತು. ಅದಕ್ಕೆ ಪ್ರಧಾನಿ ಮೋದಿ ಅವರು ತಿಲಾಂಜಲಿ ಇಟ್ಟು ಯುದ್ಧದಾಹಿ ಟ್ರಂಪ್ ಅವರ ಗೆಳೆತನ ಮಾಡಿದ ಪರಿಣಾಮ ತೈಲ ಉತ್ಪನ್ನ ಖರೀದಿಗೆ ದುಸ್ಥಿತಿ ಎದುರಾಗಿದೆ ಆರೋಪಿಸಿದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಇಸ್ರೇಲ್, ಇರಾನ್ ಮೇಲೆ ನಡೆಸುತ್ತಿರುವ ಯುದ್ಧದಿಂದ ಇರಾನಿನ ಅಮಾಯಕ ಶಾಲಾ ಮಕ್ಕಳು ಬಲಿಯಾಗುತ್ತಿದ್ದಾರೆ. ದೇಶದ ಆಮದು ಮತ್ತು ರಫ್ತುಗಳ ಮೇಲೆ ತೊಂದರೆಯಾಗಿ ಸಿಲಿಂಡರ್ ಅಭಾವ ಸೃಷ್ಟಿಯಾಗುತ್ತಿದೆ ಎಂದು ದೂರಿದರು.ಅಮೆರಿಕಾದ ಯುದ್ಧ ಕೋರ ನೀತಿಯಿಂದಾಗಿ ಜಗತ್ತಿನಲ್ಲಿರುವ ತೈಲ ಉತ್ಪನ್ನಗಳನ್ನು ತನ್ನ ಹಿಡಿತಕ್ಕೆ ಇಟ್ಟುಕೊಳ್ಳಲು ಮತ್ತು ತಾನು ಉತ್ಪಾದಿಸುವ ಯುದ್ಧ ಸಾಮಗ್ರಿಗಳನ್ನು ಮಾರಾಟ ಮಾಡಲು ಅಮೇರಿಕ ಯತ್ನಿಸುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಲಿಂಗರಾಜಮೂರ್ತಿ, ಜಿ.ರಾಮಕೃಷ್ಣ, ಎಂ.ಇ.ಮಹದೇವು, ಗುರುಸ್ವಾಮಿ, ಸುಶೀಲಾ, ಪ್ರೇಮಾ, ರತ್ನಮ್ಮ, ವಿಷಕಂಠ, ನಂಜುಂಡಸ್ವಾಮಿ, ಚಿಕ್ಕಸ್ವಾಮಿ ಸೇರಿದಂತೆ ಇತರರು ಇದ್ದರು.