ಕನ್ನಡಪ್ರಭ ವಾರ್ತೆ ಹಾಸನ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ವಾಸಿಸುವ ಸ್ಥಳ ಸೇರಿ ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಗಳಲ್ಲಿ ನಿಗದಿತ ಸಮಯದಲ್ಲಿ ಮಾತ್ರ ಮದ್ಯ ಮಾರಾಟ ಮಾಡಬೇಕು ಹಾಗೂ ಅವಧಿ ಮೀರಿ ಮದ್ಯ ಮಾರಾಟ ಮಾಡಿದ ಪ್ರಕರಣಗಳು ಕಂಡು ಬಂದರೆ ಪರವಾನಗಿ ರದ್ದುಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ/ ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿದರು.೧೮ ವರ್ಷದೊಳಗಿನ ಮಕ್ಕಳನ್ನು ಮದ್ಯ ಖರೀದಿಗೆ ಬಳಸಿಕೊಳ್ಳುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಹುದು, ಮದ್ಯಕ್ಕೆ ಬಲಿಯಾಗಿ ಶಿಕ್ಷಣ ತ್ಯಜಿಸುವ ಸಾಧ್ಯತೆಯಿದ್ದು, ಅಪರಾಧ ಚಟುವಟಿಕೆಗಳಿಗೂ ಬಲಿಯಾಗುವ ಸಂಭವವಿರುತ್ತದೆ. ಆದ್ದರಿಂದ ಎಲ್ಲಾ ಮದ್ಯದ ಅಂಗಡಿಗಳಿಗೂ ಕಡ್ಡಾಯವಾಗಿ ಸೂಚನೆ ನೀಡಬೇಕು ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಸಂದೇಶ್, ಮರಿ ಜೋಸೆಫ್, ಮಲ್ಲೇಶ್ ಅಂಬುಗ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಲವು ಮದ್ಯದ ಅಂಗಡಿಗಳಲ್ಲಿ ಬೆಳಗ್ಗೆ ೭.೩೦ ಗಂಟೆಯಿಂದಲೇ ಮಾರಾಟ ಪ್ರಾರಂಭ ಮಾಡುತ್ತಾರೆ ಎಂದು ಆರೋಪಿಸಿದರು.ಈ ವೇಳೆ ಜಿಲ್ಲಾಧಿಕಾರಿಯವರು, ತನಿಖಾ ತಂಡವನ್ನು ನೇಮಿಸಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಹಾಗೂ ಅಂತಹ ಮದ್ಯ ಅಂಗಡಿಗಳಿಗೆ ದಂಡ ವಿಧಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಸನ ತಾಲೂಕಿನ ಕಡವರಹಳ್ಳಿ ಗ್ರಾಮದ ಜೀತ ವಿಮುಕ್ತಿರಿಗೆ ಭೂಮಿ ನೀಡುವ ಕುರಿತು ಕೂಡಲೇ ಸ್ಥಳ ಪರಿಶೀಲಿಸಿ ಸರ್ವೇ ಕಾರ್ಯ ಮುಕ್ತಾಯಗೊಳಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಸಕಲೇಶಪುರ ಕಾಡು ವ್ಯಾಪ್ತಿಯಲ್ಲಿ ವಾಸವಿರುವ ಪರಿಶಿಷ್ಟ ಪಂಗಡದ ಹಕ್ಕಿಪಿಕ್ಕಿ ಜನಾಂಗದವರು, ಹಲಸರು, ಮಲೇರು ಜನಾಂಗದವರಿಗೆ ರಸ್ತೆ ಇನ್ನಿತರ ಸೌಲಭ್ಯಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಹಾಗೂ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹಕ್ಕಿಪಿಕ್ಕಿ ಸಮುದಾಯದವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿವೇಶನ ಹಂಚಿಕೆಗೆ ೮ ಎಕರೆ ಜಾಗಕ್ಕೆ ಮೊದಲು ತಂತಿಬೇಲಿ ಹಾಕಬೇಕು, ಸಮಾಜ ಕಲ್ಯಾಣ ಇಲಾಖೆಯ ಆಸ್ತಿ ಎಂದು ನಾಮಫಲಕ ಹಾಕುವಂತೆ ಸೂಚಿಸಿದರು.ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಸಂತ್ರಸ್ತರ ಪುನರ್ ವಸತಿ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಕಲೇಶಪುರ ತಾಲೂಕಿನ ಹುಲ್ಲ ಹಳ್ಳಿ ಗ್ರಾಮದ ಸರ್ವೇ ನಂಬರ್ ೧೬ ರಲ್ಲಿನ ಗೋಮಾಳದ ೩ ಎಕರೆ ಜಮೀನನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಿ ಪರಿಶಿಷ್ಟ ವರ್ಗಗಳ, ಬುಡಕಟ್ಟು ಸಮುದಾಯ, ಹಲಸರು ಗಿಡಮೂಲಿಕೆಗಳನ್ನು ಬೆಳೆಯಲು ಕ್ರಮ ವಹಿಸುವಂತೆ ಸೂಚಿಸಿದರು.ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪೊಲೀಸ್ ಅಧಿಕಾರಿಗಳು, ಪಿಡಿಒಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿ ಸ್ಥಳೀಯ ಸಮುದಾಯದ ಮುಖಂಡರನ್ನು ಸೇರಿಸಿ ಅರಿವು ಕಾರ್ಯಕ್ರಮ ನಡೆಸಲು ಸೂಚಿಸಿದರು.
ಪೊಲೀಸ್ ಇಲಾಖೆಯು ಗ್ರಾಮಗಳಲ್ಲಿ ಗಸ್ತು ತಿರುಗಬೇಕು, ಶಾಂತಿಪಾಲನ ಸಮಿತಿ ರಚಿಸಿ, ಸಭೆ ನಡೆಸಿ ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು.ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಗಳನ್ನು ಕೊರೆದಿದ್ದು, ಚೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಿಲ್ಲ ಎಂದು ಸಮಿತಿಯ ಸದಸ್ಯರು ಸಭೆ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಸಂಪರ್ಕ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ವಾಸಿಸುವ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವುದಿಲ್ಲ ಎಂದು ಸದಸ್ಯರು ಸಭೆಯಲ್ಲಿ ಆರೋಪಿಸಿದರು. ಜಿಲ್ಲಾಧಿಕಾರಿಯವರು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸಮಿತಿಯ ಸದಸ್ಯರಾದ ಶಿವಮ್ಮ, ಬೈರೇಶ್ ಶಿವಪ್ಪ ನಾಯಕ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟಿ ಕೃಷಿ ನಿರ್ದೇಶಕರಾದ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಧೂದ್ ಫೀರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.