ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬರ ಪರಿಸ್ಥಿತಿ ಇರುವ ಗ್ರಾಮಗಳ ಕೆರೆಗಳಿಗೆ ತುಂಬಿಸುವುದರಿಂದ ನೀರು ಅಂತರ್ಜಲ ಅಭಿವೃದ್ಧಿಯಾಗುವ ಜೊತೆಗೆ ರೈತರು ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ತಾಲೂಕಿನ ಮೊಸಳೆ ಕೊಪ್ಪಲು ಗ್ರಾಮದ ಬಳಿಯಿಂದ ಸಿಂಧುಘಟ್ಟ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಐಚನಹಳ್ಳಿ ಏತ ನೀರಾವರಿ ಎರಡನೇ ಹಂತದ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ, ಹೇಮಾವತಿ ನದಿಯಿಂದ ತಾಲೂಕಿನ ಬರಪೀಡಿತ ಪ್ರದೇಶದ ಕೆರೆ ಕಟ್ಟೆಗಳನ್ನು ತುಂಬಿಸುವ ಸದುದ್ದೇಶದಿಂದ ತಾಲೂಕಿನ ಕಟ್ಟಹಳ್ಳಿ ಮತ್ತು ಗೂಡೇಹೊಸಹಳ್ಳಿ ಬಳಿ ಎರಡು ಏತ ನೀರಾವರಿ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಕಟ್ಟಹಳ್ಳಿ ಬಳಿಯ ಐಚನಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತದಲ್ಲಿ ಕಳೆದ ವರ್ಷ ತಾಲೂಕಿನ ಬೂಕನಕೆರೆ ಹೋಬಳಿಯ ಬಹುತೇಕ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಮೊಸಳೆ ಕೊಪ್ಪಲು ಬಳಿಯಿಂದ ಶೀಳನೆರೆ ಹೋಬಳಿಯ ಭೈರಾಪುರ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ ಎಂದರು.

ಶೀಳನೆರೆ ಹೋಬಳಿಯ ಬಹುತೇಕ ಭಾಗ ಮಳೆಯಾಶ್ರಿತ ಪ್ರದೇಶವಾಗಿದ್ದು, ಕಳೆದ ಸಾಲಿನಲ್ಲಿ ಹೇಮಾವತಿ ನದಿಯ ನೀರನ್ನು ಅರ್ಧ ಪ್ರದೇಶಕ್ಕೆ ಹರಿಸಲಾಗಿತ್ತು. ಇನ್ನುಳಿಕೆ ಅರ್ಧ ಭಾಗದ ಕೆರೆಗಳನ್ನು ತುಂಬಿಸುವ ಮೂಲಕ ರೈತರು ನೆಮ್ಮದಿಯಿಂದ ಬೆಳೆಗಳನ್ನು ಬೆಳೆಯಲು ಅನುಕೂಲ ಮಾಡಿಕೊಡಬೇಕೆಂಬ ಉದ್ದದೇಶದಿಂದ ಕಳೆದ ಎರಡು ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಅನುಪಾಲನೆ ಮಾಡಲಾಗಿದೆ. ಇದರ ಪರಿಣಾಮ ಭೈರಾಪುರ ಕೆರೆಯ ವರೆಗೆ ನೀರು ಹರಿಸುತ್ತಿದ್ದು, ಕಾಮಗಾರಿಯ ವೀಕ್ಷಣೆ ಮಾಡಿದ್ದೇನೆ ಎಂದರು.


ರೈತರ ಕೆರೆಗಳಿಗೆ ನೀರು ಹರಿಯುತ್ತಿರುವುದನ್ನು ನೋಡಿ ಸಂತೋಷಗೊಂಡಿದ್ದೇನೆ. ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳೂ ಹೇಮೆಯ ನೀರಿನಿಂದ ತುಂಬಿ ತುಳುಕಿದರೆ ರೈತರ ಮಕ್ಕಳು ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಮುಂತಾದ ಮಹಾ ನಗರಗಳಿಗೆ ವಲಸೆ ಹೋಗುವುದು ನಿಲ್ಲುತ್ತದೆ. ಐಚನಹಳ್ಳಿ ಏತ ನೀರಾವರಿ ಯೋಜನೆ ಜಾರಿಗೊಂಡಿದ್ದರ ಹಿಂದೆ ಬೂಕನಕೆರೆ ಮಣ್ಣಿನ ಮಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆಯಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕೂಡ ಈ ಯೋಜನೆಗೆ ಸಹಕರಿಸಿದ್ದಾರೆ ಎಂದು ಸ್ಮರಿಸಿದರು.

ಅತ್ಯಂತ ಬರಪೀಡಿತ ಪ್ರದೇಶ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಅನುದಾನದ ಕೊರತೆಯಿಂದ ಬಳಲುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳ ಜೊತೆಗೆ ನೆರೆಯ ನಾಗಮಂಗಲ ತಾಲೂಕಿನ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಿ ಆ ಭಾಗದ ರೈತರ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಹುದು ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದರು. ಬಹುಕಾಲದಿಂದ ಈ ಯೋಜನೆ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಈ ಯೋಜನೆ ಪೂರ್ಣಗೊಳ್ಳಲು ಕ್ಷೇತ್ರದ ಶಾಸಕನಾಗಿ ನಾನು ಹಲವು ಬಾರಿ ಮನವಿ ಮಾಡಿದ್ದರೂ ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ಈ ವೇಳೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನಿರ್ಮಲೇಶ್, ಗ್ರಾಪಂ ಮಾಜಿ ಅಧ್ಯಕ್ಷ ಭೈರಾಪುರ ಹರೀಶ್, ಶಾಸಕರ ಆಪ್ತ ಸಹಾಯಕರಾದ ಧ್ರುವ, ಪ್ರದೀಪ್, ಹಾಗೂ ಭೈರಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.