ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಳೆದೆರಡು ದಿನಗಳಿಂದ ನದಿ ದಂಡೆಯಲ್ಲೇ ಭೀಕರ ಸೆಳವಿಗೆ ಕಾರಣವಾಗಿದ್ದ ಕೃಷ್ಣೆ ಇದೀಗ ಒಳ ಹರಿವಲ್ಲಿ ಕುಸಿತ ಕಂಡಿದ್ದು, ನದಿ ಪಾತ್ರದಲ್ಲಿನ ನೀರಿನ ಸೆಳೆತ ಕೊಂಚ ಕಡಿಮೆಯಾಗಿದ್ದರೂ, ಸೆಳೆತ ಕಾಯ್ದುಕೊಂಡಿದ್ದು, ನದಿ ಪಾತ್ರದ ಜನತೆ-ಜಾನುವಾರು ತೆರಳದಂತೆ ಜಮಖಂಡಿ ಎಸಿ ಶ್ವೇತಾ ಬೀಡಕರ ಎಚ್ಚರಿಸಿದ್ದಾರೆ. ಕಳೆದೆರಡು ದಿನಗಳಿಂದ ಮಹಾ ಮಳೆ ಮತ್ತು ಅಲ್ಲಿನ ಜಲಾಶಯಗಳಿಂದ ಬಿಡುಗಡೆಯಾದ 1,33,081 ಕ್ಯುಸೆಕ್ ನೀರಿನ ಒಳ ಹರಿವು ಗುರುವಾರ ಬೆಳಗ್ಗೆನಿಂದ 1,13,767 ಕ್ಯುಸೆಕ್‌ಗೆ ಕುಸಿತವಾಗಿದ್ದರೂ ಯಾವುದೇ ಹಂತದಲ್ಲಿ ಮಳೆ ಪ್ರಮಾಣ ಹೆಚ್ಚಿ ನೀರು ಬಿಡುಗಡೆ ಪ್ರಮಾಣದಲ್ಲೂ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ. ಕೃಷ್ಣೆಯಲ್ಲಿ ಸೆಳವಿನ ಗತಿ ತೀವೃವಾಗಿದ್ದು, ಜನತೆ ತಮ್ಮ ಜಾನುವಾರುಗಳನ್ನು ನದಿ ಪಾತ್ರದತ್ತ ಬಿಡದಂತೆ ಜಾಗೃತೆ ವಹಿಸಬೇಕು. ಪ್ರವಾಹದ ಭೀತಿ ಸದ್ಯಕ್ಕೆ ಇಲ್ಲವಾಗಿದ್ದು, ಒಳ ಹರಿವಿನ ಪ್ರಮಾಣ ಕುಸಿತವಾಗುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ ಬಂದಷ್ಟೇ ನೀರನ್ನು ಹೊರಬಿಡುತ್ತಿದ್ದು, ಪ್ರವಾಹದಾತಂಕ ದೂರಾಗಿದೆ.