ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದ ಹಿನ್ನೆಲೆಯಲ್ಲಿ ಯಶವಂತರಾಯ ಗೌಡ ಪಾಟೀಲ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ವಿಷಯ ಇದು ಸದನದ ಹೊರಗೆ ಹಾಗೂ ಒಳಗೆ ತೀವ್ರ ಚರ್ಚೆಗೆ ಕಾರಣಯಿತು.

ಬೆಂಗಳೂರು : ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದ ಹಿನ್ನೆಲೆಯಲ್ಲಿ ಯಶವಂತರಾಯ ಗೌಡ ಪಾಟೀಲ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ವಿಷಯ ಇದು ಸದನದ ಹೊರಗೆ ಹಾಗೂ ಒಳಗೆ ತೀವ್ರ ಚರ್ಚೆಗೆ ಕಾರಣಯಿತು.

ವಾರದ ಹಿಂದಷ್ಟೇ ಗದಗವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಸಚಿವ ಎಚ್‌.ಕೆ. ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಬರ ವಿಚಾರಕ್ಕಾಗಿಯೇ ವಿಧಾನಸಭೆ ಸಭಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಯಶವಂತರಾಯಗೌಡ ಎರಡನೇ ಬಾರಿಗೆ ರಾಜೀನಾಮೆ ನೀಡಿದ್ದು, ಬುಧವಾರ ವಿಧಾನಸಭೆ ಕಲಾಪದಲ್ಲೂ ಈ ವಿಚಾರ ಕೋಲಾಹಲ ಸೃಷ್ಟಿಸಿತು.

ಬುಧವಾರ ಬೆಳಗ್ಗೆ ಯಶವಂತರಾಯ ಗೌಡ ಅವರು ಸ್ಪೀಕರ್ ಜಿ.ಎಸ್. ಪಾಟೀಲ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಬಳಿಕ ಸ್ವತಃ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಮನವೊಲಿಕೆ ಯತ್ನ ನಡೆಸಿದರು. ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲದ ಕಾರಣ ಅದನ್ನು ತಿರಸ್ಕರಿಸಿರುವುದಾಗಿ ಸ್ಪೀಕರ್‌ ಹೇಳುವುದರೊಂದಿಗೆ ಪ್ರಕರಣ ಅಂತ್ಯಗೊಂಡಿತು.

ರಾಜೀನಾಮೆ ಪತ್ರದಲ್ಲಿ ಏನಿತ್ತು?:

ವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಇದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಆ.28 ರಂದು ಪತ್ರ ಬರೆದು ಬರಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದೆ.

ಆದರೆ ವಿಜಯಪುರ ಜಿಲ್ಲೆಯ ಒಟ್ಟು 13 ತಾಲ್ಲೂಕುಗಳ ಪೈಕಿ ನನ್ನ ಇಂಡಿ ಮತ್ತು ಚಡಚಣ 2 ತಾಲೂಕು ಹೊರತುಪಡಿಸಿ, ಇದುವರೆಗೂ ರಾಜ್ಯದ 177 ತಾಲೂಕುಗಳಲ್ಲಿ ಬರ ಘೋಷಿಸಲಾಗಿದೆ. ನಾನು ಆಡಳಿತಪಕ್ಷದ ಶಾಸಕನಾಗಿದ್ದರೂ ನನಗೆ ಬೆಲೆ ಇಲ್ಲ. ನನ್ನ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಯಶವಂತರಾಯಗೌಡ ಉಲ್ಲೇಖಿಸಿದ್ದರು.

ಸದನದಲ್ಲಿ ಪ್ರಸ್ತಾಪಿಸಿದ ಪ್ರತಿಪಕ್ಷ:

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಯಶವಂತರಾಯಗೌಡ ಪಾಟೀಲ ಸ್ಪೀಕರ್‌ಗೆ ನೀಡಿದ ರಾಜೀನಾಮೆ ಪತ್ರವನ್ನು ಬಹಿರಂಗಪಡಿಸಿದರು. ಬರ ನಿರ್ವಹಣೆ ವೈಫಲ್ಯಕ್ಕೆ ಆಡಳಿತ ಪಕ್ಷದ ಶಾಸಕರೇ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ, ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡರು.

ದನಿಗೂಡಿಸಿದ ವಿ. ಸುನಿಲ್‌ ಕುಮಾರ್‌, ‘ಅಧಿವೇಶನ ನಡೆದಿರುವಾಗಲೇ ಸದಸ್ಯರೊಬ್ಬರು ತಮಗೆ ರಾಜೀನಾಮೆ ಪತ್ರ ನೀಡಿದ್ದಾರೆ. ನೀವು ಅದನ್ನು ಸ್ವೀಕರಿಸಿದ್ದೀರಾ ಅಥವಾ ತಿರಸ್ಕರಿಸಿದ್ದೀರಾ? ಅದನ್ನು ಸದನಕ್ಕೆ ತಿಳಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ‘ಇದು ನಮ್ಮ ಪಕ್ಷದ ಆಂತರಿಕ ವಿಚಾರ. ಇದೆಲ್ಲದಕ್ಕೂ ಮೂಲಕಾರಣ ನೀವು ಮತ್ತು ನಿಮ್ಮ ಕೇಂದ್ರ ಸರ್ಕಾರ. ಬರ ಘೋಷಣೆಗೆ ಇರುವ ಮಾನದಂಡಗಳನ್ನು ಸಡಿಲೀಕರಿಸಿ ಅಂತ ಹತ್ತಾರು ಬಾರಿ ಪತ್ರ ಬರೆದಿದ್ದೇವೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದು ಹೇಳಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ‘ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್‌ಗೆ ನೀಡಿದ್ದಾರೆ. ಆಂತರಿಕ ವಿಚಾರ ಹೇಗೆ ಆಗುತ್ತದೆ? ರಾಜೀನಾಮೆ ಬಗೆಗಿನ ನಿರ್ಧಾರವನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಯಶವಂತರಾಯ ಪಾಟೀಲ್‌ ಅವರು ರಾಜೀನಾಮೆಗೆ ಮುಂದಾಗಿದ್ದು ರೈತರ ಬದುಕಿಗಾಗಿಯೇ ಹೊರತು ಬೇರೆ ರೀತಿಯಲ್ಲ. ರೈತರ ಭಾವನೆಗಳು ಮತ್ತು ಒತ್ತಡದಿಂದ ರಾಜೀನಾಮೆ ನೀಡಿರಬಹುದು. ಅವರ ಮನವೊಲಿಸಿದ್ದೇವೆ. ಪ್ರತಿಪಕ್ಷದವರು ಭಾವನಾತ್ಮಕವಾಗಿ ರಾಜೀನಾಮೆ ನೀಡಿದರೂ ನಾವು ಆತುರದಲ್ಲಿ ಅಂಗೀಕಾರ ಮಾಡಲ್ಲ ಎಂದರು.

ರಾಜೀನಾಮೆ ಕ್ರಮಬದ್ಧವಿಲ್ಲ- ಸ್ಪೀಕರ್‌

ಮುಖ್ಯಮಂತ್ರಿ ಪ್ರತಿಕ್ರಿಯೆ ನಂತರವೂ ಪ್ರತಿಪಕ್ಷಗಳ ಸದಸ್ಯರು, ಶಾಸಕರ ರಾಜೀನಾಮೆ ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಅಥವಾ ಕಾಯ್ದಿರಿಸಲಾಗಿದೆಯೇ ಎಂಬುದನ್ನು ಸ್ಪೀಕರ್‌ ಸ್ಪಷ್ಟಪಡಿಸಬೇಕು ಗದ್ದಲ ಸೃಷ್ಟಿಸಿದರು.

ಆಗ ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್‌. ಪಾಟೀಲ, ‘ಶಾಸಕ ಯಶವಂತರಾಯಗೌಡ ಪಾಟೀಲ ನೀಡಿದ ರಾಜೀನಾಮೆ ಪತ್ರವು ಕ್ರಮಬದ್ಧವಾಗಿಲ್ಲ. ಹಾಗಾಗಿ, ಅದನ್ನು ಸ್ವೀಕರಿಸಲಾಗದು’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

ಬರ ಘೋಷಿಸದ್ದಕ್ಕೆ ಕೈ ಶಾಸಕ ಸಿಟ್ಟು

- ವಿಜಯಪುರ ಜಿಲ್ಲೆಯ ಇಂಡಿ, ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದ್ದಕ್ಕೆ ಆಕ್ರೋಶ

- ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಯಶವಂತರಾಯಗೌಡ ಪಾಟೀಲ್‌

- ಈ ವಿಚಾರ ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರ್ಕಾರಕ್ಕೆ ಪ್ರತಿಪಕ್ಷ ಸದಸ್ಯರಿಂದ ತೀವ್ರ ತರಾಟೆ

- ಇದು ಆಂತರಿಕ ವಿಚಾರ, ಪಾಟೀಲ್‌ ರಾಜೀನಾಮೆಗೆ ಕೇಂದ್ರ ಕಾರಣ ಎಂದ ಡಾ। ಜಿ. ಪರಮೇಶ್ವರ್‌

- ಈ ನಡುವೆ ಸಿಎಂ ಡಿಕೆಶಿಯಿಂದ ಮನವೊಲಿಕೆ. ನಾಮಪತ್ರ ಕ್ರಮಬದ್ಧವಾಗಿಲ್ಲ ಎಂದ ಸ್ಪೀಕರ್‌