ಕನ್ನಡಪ್ರಭ ವಾರ್ತೆ ಜಮಖಂಡಿಬರಗಾಲ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಬರಗಾಲ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಸರ್ಕಾರವನ್ನು ಆಗ್ರಹಿಸಿದರು.

ಬುಧವಾರ ನಡೆದ ಅಧಿವೇಶದ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಕೇವಲ ಮೂರ ರಿಂದ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಪೂರೈಸಿರುವುದರಿಂದ ಬೆಳೆಗಳು ಒಣಗುತ್ತಿವೆ. ಕ್ಷೇತ್ರದಲ್ಲಿ ಏತನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸುವ ಮೂಲಕ ರೈತರ ಜಮೀನುಗಳಿಗೆ ನೀರು ಪೂರೈಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ಆಲಮಟ್ಟಿ ಜಲಾಶಯದ ಒಳ ಹರಿವು ಇಲ್ಲವಾಗಿದೆ. ಜಲಾಶಯದಲ್ಲಿ ಸಂಗ್ರಹವಿರುವ ಹಿನ್ನಿರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ಜಲಾಶಯ ಖಾಲಿಯಾಗುವ ಸಂಭವವಿದೆ. ಆದ್ದರಿಂದ ಈಗಿನಿಂದಲೆ ಕುಡಿಯುವ ನೀರಿಗಾಗಿ ಕೊಯಿನಾ ಜಲಾಶಯದಿಂದ 2 ಟಿಎಂಸಿ ಯಷ್ಟು ನೀರು ಬಿಡಿಸಿಕೊಳ್ಳಲು ಸರ್ಕಾರ ಪ್ರಯತ್ನ ಮಾಡಬೇಕು. ಜನವರಿ ಹೊತ್ತಿಗೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೊಸ ಬೋರ್‌ವೆಲ್‌ಗಳನ್ನು ಕೊರೆಯಲು ಅನುಮತಿಯನ್ನು ನಿರಾಕರಿಸಿರುವ ಸರ್ಕಾರ ಹೊಸ ಕೊಳವೆಭಾವಿಗಳಿಗೆ ಅಗತ್ಯ ಪರವಾನಿಗೆ ನೀಡುವ ಮೂಲಕ ಬರ ಪರಿಸ್ಥಿತಿಯ ನಿರ್ವಹಣೆಗೆ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಬೇಕು ಎಂದರು.

ತೋಟದ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ನಿರಂತರ ಜ್ಯೋತಿ ಸೌಲಭ್ಯ ಒದಗಿಸಬೇಕು, 50 ರಿಂದ ನೂರು ಕುಟುಂಬಗಳು ಒಂದೆಡೆ ವಾಸಿಸುತ್ತಿರುವ ಸ್ಥಳಗಳಿಗೆ ನಿರಂತರ ಜ್ಯೋತಿ ಲೈನ್‌ಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು. ಕಳೆದ ವರ್ಷ ಬರಗಾಲದ ಸಂದರ್ಭದಲ್ಲಿ ಟಾಸ್ಕ ಫೋರ್ಸ್‌ನ ವತಿಯಿಂದ ಕೈಗೊಂಡ ಬರಪರಿಹಾರ ಕಾಮಗಾರಿಗಳ ಬಿಲ್‌ಗಳು ಇನ್ನೂ ಬಿಡುಗಡೆಯಾಗಿಲ್ಲ ಸುಮಾರು ₹2 ಕೋಟಿಗಳನ್ನು ಗುತ್ತಿಗೆದಾರರಿಗೆ ನೀಡಬೇಕಿದೆ. ಆದ್ದರಿಂದ ಸರ್ಕಾರ ಕೂಡಲೇ ಬಿಲ್‌ಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.