ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿದೆ. ಬೆಳಗಾವಿಯ ಪ್ರತಿಭಾವಂತರು ಇಲ್ಲಿಯೇ ಉದ್ಯಮ ಆರಂಭಿಸುವಂತ ವಾತಾವರಣ ನಿರ್ಮಾಣವಾಗಬೇಕು ಎಂದು ಖ್ಯಾತ ಉದ್ಯಮಿ ಅಜಿತ್ ಪಾಟೀಲ ಹೇಳಿದರು.ಕಾಕತಿಯ ವುಡ್ರೋಸ್ ಹೋಟೆಲ್ ಸಭಾಂಗಣದಲ್ಲಿ ಲಿಂಗಾಯತ ಬಿಸಿನೆಸ್ ಫೋರಂ ಮಹಿಳಾ ವಿಭಾಗದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಮಹಿಳೆಯರು ಬಾಲ್ಯದಿಂದಲೇ ಜವಾಬ್ದಾರಿ ಮತ್ತು ಯೋಜನಾ ಕೌಶಲ ಬೆಳೆಸಿಕೊಳ್ಳುತ್ತಾರೆ. ಆದರೆ, ತಮ್ಮ ಪ್ರತಿಭೆಯನ್ನು ಉದ್ಯಮ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಹಿಂಜರಿಯುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.ಫೋರಂ ಕಾರ್ಯಕಾರಿ ಸಮಿತಿ ಅಧ್ಯಕ್ಷ ಲಿಂಗರಾಜ ಜಗಜಂಪಿ ಮಾತನಾಡಿ, ಮಹಿಳಾ ವಿಭಾಗದ ಆರಂಭವು ಫೋರಂ ಇತಿಹಾಸದ ಮಹತ್ವದ ಘಟ್ಟವಾಗಿದ್ದು, ಸಮಾನತೆಯ ತತ್ವವನ್ನು ಕಾರ್ಯರೂಪಕ್ಕೆ ತರುವ ಹೆಜ್ಜೆಯಾಗಿದೆ ಎಂದರು. ಸಂಸ್ಥಾಪಕ ಸದಸ್ಯ ಮಲ್ಲಿಕಾರ್ಜುನ ಮುದನೂರ ಅವರು, ಸಂಸ್ಥೆಯ ಬೆಳವಣಿಗೆ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷೆ ಶೀತಲ್ ಚಿಲಮಿ ಮಾತನಾಡಿ, ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ, ಆರ್ಥಿಕ ಸಾಕ್ಷರತೆ, ಮಾರುಕಟ್ಟೆ ಸಂಪರ್ಕ ಹಾಗೂ ಹೊಸ ಉದ್ಯಮ ಅವಕಾಶಗಳನ್ನು ಕಲ್ಪಿಸುವುದು ಮಹಿಳಾ ವಿಭಾಗದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು. ನೂತನ ಕಾರ್ಯದರ್ಶಿ ಶಿವಲೀಲಾ ಕಂಪ್ಲಿ ಮುಂದಿನ ಕಾರ್ಯಯೋಜನೆ ಮಂಡಿಸಿದರು. ಸಂತೋಷ ಪಾವಟೆ, ಜ್ಯೋತಿ ನಿಂಬಾಳ ಅತಿಥಿಗಳನ್ನು ಪರಿಚಯಿಸಿದರು. ರಾಜಶೇಖರ ಶೀಲವಂತ ಕಾರ್ಯಕ್ರಮದ ಸಂಯೋಜನೆ ವಹಿಸಿದ್ದರು. ಸಚಿನ್ ಬೈಲವಾಡ ವಂದಿಸಿದರು. ಮಡಿವಾಳಪ್ಪ ತಿಗಡಿ ಕಾರ್ಯಕ್ರಮ ನಿರೂಪಿಸಿದರು.ಈ ವೇಳೆ ಈರಣ್ಣ ದೇಯನ್ನವರ, ರಾಜೀವ್ ಶೀಗಿಹಳ್ಳಿ, ಲಕ್ಷ್ಮಿಕಾಂತ ಗುರವ, ವಿಜಯ ಪಾಟೀಲ, ಮಹಾಂತೇಶ ಪುರಾಣಿಕ್ ಸೇರಿದಂತೆ ಉದ್ಯಮಿಗಳು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಫೋರಂ ಸದಸ್ಯರು ಉಪಸ್ಥಿತರಿದ್ದರು.ಶೀತಲ್ ಅಧ್ಯಕ್ಷೆ, ಡಾ.ಸ್ಪೂರ್ತಿ ಉಪಾಧ್ಯಕ್ಷೆಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಶೀತಲ್ ಚಿಲಮಿ, ಉಪಾಧ್ಯಕ್ಷೆಯಾಗಿ ಡಾ.ಸ್ಪೂರ್ತಿ ಮಾಸ್ತಿಹೊಳಿ, ಕಾರ್ಯದರ್ಶಿಯಾಗಿ ಶಿವಲೀಲಾ ಕಂಪ್ಲಿ ಬೈಲವಾಡ, ಖಜಾಂಚಿಯಾಗಿ ಜ್ಯೋತಿ ನಿಂಬಾಳ, ಸದಸ್ಯತ್ವ ನಿರ್ದೇಶಕಿಯಾಗಿ ಆಶಾ ಪಾಟೀಲ, ಸಾರ್ವಜನಿಕ ಸಂಪರ್ಕ ನಿರ್ದೇಶಕಿಯಾಗಿ ಅಶ್ವಿನಿ ಪಾಟೀಲ, ನಿರ್ದೇಶಕಿಯಾಗಿ ರೇಖಾ ಕಳ್ಳೀಮನಿ ಹಾಗೂ ಸಮುದಾಯ ಸೇವಾ ನಿರ್ದೇಶಕಿಯಾಗಿ ಶಿವಲೀಲಾ ಕಂಪ್ಲಿ ಅಧಿಕಾರ ಸ್ವೀಕರಿಸಿದರು.