ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಅಲ್ಪಸ್ವಲ್ಪ ಮಳೆಯ ಆಶಾಭಾವನೆಯಲ್ಲಿ ಕೆಲವು ರೈತರು ಬಿತ್ತನೆ ಮಾಡಿದರೂ ತೇವಾಂಶ ಕೊರತೆಯಿಂದ ಬಿತ್ತನೆ ಮಾಡಿದ ಫಸಲು ಕೈಗೆ ಬಾರದೆ ಕಂಗಾಲಾಗಿದ್ದಾರೆ. ಒಮ್ಮೆ ಅತಿವೃಷ್ಟಿಗೆ ಸಿಲುಕಿ ಬೆಳೆ ಹಾನಿಯಾದರೆ ಮತ್ತೊಮ್ಮೆ ಅನಾವೃಷ್ಟಿಗೆ ಸಿಲುಕಿ ಬೆಳೆಹಾನಿ ಅನುಭವಿಸುತ್ತಿದ್ದು, ಹಾಕಿದ ಬಂಡವಾಳ ಮರಳಿ ಬಾರದೇ ರೈತರು ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ. ಬರದ ಹಿನ್ನೆಲೆ ರೈತರ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಬೆಳೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

ಶೇ.31ರಷ್ಟು ಮಳೆ ಕೊರತೆ, ಬಿತ್ತನೆ ಕುಂಠಿತ:

ಜಿಲ್ಲೆಯಲ್ಲಿ ಹವಮಾನ ವೈಪರಿತ್ಯದಿಂದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದರಿಂದ ಜಿಲ್ಲೆಯಲ್ಲಿ ಶೇ.31ರಷ್ಟು ಮಳೆಯ ಕೊರತೆಯುಂಟಾಗಿದೆ. ಜುಲೈನಲ್ಲಿ 187.6 ಮಿಮೀ ಆಗಬೇಕಿದ್ದ ಮಳೆ ಕೇವಲ 167.8 ಮಿಮೀ ಆಗಿದೆ.


ಜಿಲ್ಲೆಯಲ್ಲಿ ತೊಗರಿ 2,50,000 ಹೆಕ್ಟೇರ್‌, ಹತ್ತಿ 84,000 ಹೆಕ್ಟೇರ್‌, ಮೆಕ್ಕೆಜೋಳ 80,000 ಹೆಕ್ಟೇರ್‌, ಸೂರ್ಯಕಾಂತಿ 6000 ಹೆಕ್ಟೇರ್‌, ಕಬ್ಬು 1,05,000 ಹೆಕ್ಟೇರ್‌ (ಕುಳೆ ಮತ್ತು ಹಚ್ಚುಕಬ್ಬು) ಬಿತ್ತನೆಯಾಗಿದ್ದರೂ ಬೆಳೆಗಳು ತೇವಾಂಶ ಕೊರತೆಯಿಂದ ಸಂಕಷ್ಟದಲ್ಲಿದೆ. ಒಣಹವೆ ಪರಿಸ್ಥಿತಿಯಲ್ಲಿ ರೈತರಿಗೆ ಬೆಳೆ ಉಳಿಸಿಕೊಳ್ಳಲು ವಿಜಯಪುರದ ಕೃಷಿ ವಿಜ್ಞಾನ ಕೇಂದ್ರ ಕೆಲವು ಸಲಹೆ ನೀಡಿದೆ.

ತೊಗರಿ ಬೆಳೆ: ಸಾಧ್ಯವಾದರೆ ತೊಗರಿ ಬಿತ್ತನೆ ನಿಲ್ಲಿಸಬೇಕು. ಬಿತ್ತನೆಯಾದ ತೊಗರಿಯಲ್ಲಿ ತೇವಾಂಶ ನೋಡಿಕೊಂಡು ಗಿಡಗಳು ದಟ್ಟವಾಗಿದ್ದರೆ ಅವುಗಳನ್ನು ತೆಗೆಯಬೇಕು. ತೊಗರಿ ಬಿತ್ತನೆ ಮಾಡಿದರೆ ಇಳುವರಿ ಕಡಿಮೆಯಾಗುವುದು. ಬಿತ್ತುವವರು ಸುಣ್ಣದ ನೀರಿನಲ್ಲಿ 2 ತಾಸು ನೆನೆಹಾಕಿ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಿದರೆ ಬೇಗನೆ ಮೊಳಕೆ ಬರುವುದು. ಒಂದು-ಒಂದೂವರೆ ಅಥವಾ ಎರಡು ತಿಂಗಳ ತೊಗರಿ ಇದ್ದರೆ ಬರ ನಿಯಂತ್ರಣಕ್ಕಾಗಿ ಪೋಟ್ಯಾಸಿಯಂ ನೈಟ್ರೆಟ್‌ 5 ಗ್ರಾಂ/ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. ತೊಗರಿಯಲ್ಲಿ ಮೇಲಿಂದ ಮೇಲೆ ಎಡೆ ಹೊಡೆಯುವುದರಿಂದ ತೇವಾಂಶ ಸಂರಕ್ಷಣೆಯಾಗಿ ಕಳೆಯ ಬಾದೆಯು ಕಡಿಮೆಯಾಗುವುದು.

ಆಗಸ್ಟ್‌ನಲ್ಲಿ ಮಳೆಯಾದರೆ ಬಿತ್ತನೆ ಮಾಡದವರು ಸೂರ್ಯಕಾಂತಿ ಅಥವಾ ಅಜವಾನ ಬಿತ್ತನೆ ಮಾಡಬಹುದು. ಹಿಂಗಾರಿ ಬೆಳೆಗಳಿಗೆ ಹೋಗುವವರು ತಮ್ಮ ಕ್ಷೇತ್ರದಲ್ಲಿ ಚೌಕ ಮಡಿಗಳನ್ನು ಮಾಡಿ ಬಿದ್ದ ಮಳೆಯು ಹೊಲದಲ್ಲಿಯೇ ಇಂಗುವ ಹಾಗೆ ಮಾಡಬೇಕು. ಹತ್ತಿಯನ್ನು ಬಿತ್ತಿದವರು ರಸಹಿರುವ ಕೀಟಗಳ ನಿಯಂತ್ರಣಕ್ಕಾಗಿ ಅಂತರವ್ಯಾಪಿ ಕೀಟನಾಶಕಗಳಾದ ಅಶಿಟಮಾಪ್ರೆಡ ಅಥವಾ ಥೈಯಮೀಥ್ಯಸಮಂ 0.5 ಗ್ರಾಂ/ಲೀ. ಬೆರೆಸಿ ಸಿಂಪರಣೆಮಾಡಬೇಕು. ಹೂಗಳ ಸಂಖ್ಯೆ ಹೆಚ್ಚಿಸಲು ಮತ್ತು ಶುಭ್ರ ಹತ್ತಿ ಒಡೆಯಲು ಪೊಟ್ಯಾಸಿಯಂ ನೈಟ್ರೆಟ್‌ 10 ಗ್ರಾಂ/ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ನೀರು ಕಡಿಮೆ ಇದ್ದರೆ ಸಾಲು ಬಿಟ್ಟು ಸಾಲು ನೀರು ಕೊಡಬೇಕು.

ಮೆಕ್ಕೆಜೋಳ: ಕೆಎನ್‌ಓ 3 -10ಗ್ರಾಂ/ಲೀ ಮತ್ತು ಎಂಓಪಿ 2ಗ್ರಾಂ/ಲೀ. ನೀರಿಗೆ ಬೆರೆಸಿ ಸಿಂಪರಣೆ ಕೈಗೊಳ್ಳಬೇಕು. ಯುರಿಯಾ ಸಿಂಪರಣೆ ತೇವಾಂಶ ಕಡಿಮೆ ಇದ್ದರೆ ಮಾಡಬಾರದು. ನೀರು ಇದ್ದರೆ ಸಾಲು ಬಿಟ್ಟ ಸಾಲು ನೀರು ಕೊಡಬೇಕು ಆದರೆ ಇಗ ಬಿತ್ತನೆ ಮಾಡಬಾರದು. ಕಬ್ಬಿನಲ್ಲಿ ಸಹ ಸಾಲು ಬಿಟ್ಟು ಸಾಲು ನೀರು ಅಥವಾ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ತೇವಾಂಶ ಕೊರತೆ ನಿರ್ವಹಿಸಲು ಶೇ.2.5 ಕೆಸಿಎಲ್‌ ಸಿಂಪರಣೆ ಮಾಡಬೇಕು. ಮಾಹಿತಿಗಾಗಿ ವಿಜಯಪುರದ ಕೃಷಿ ವಿಜ್ಞಾನ ಕೇಂದ್ರದ ಸಂಖ್ಯೆಗಳಿಗೆ: 9448973685, 9353181205, 8618667839 ಸಂಪರ್ಕಿಸಬಹುದಾಗಿದೆ.

ಈ ಬಾರಿ ಮುಂಗಾರಿನಲ್ಲಿ ಮಳೆ ಸರಿಯಾಗಿ ಆಗದ ಕಾರಣ ಬಿತ್ತನೆಯಲ್ಲಿ ಕುಂಠಿತವಾಗಿದೆ. ಬಿತ್ತಿದ ಬೆಳೆಗಳಲ್ಲಿ ಇಳುವರಿಯೂ ಕೈಕೊಡುವ ಸಾಧ್ಯತೆ ಇದೆ. ಹಾಗಾಗಿ ರೈತರು ತಮ್ಮ ಬೆಳೆಗಳಿಗೆ ಬೆಳೆವಿಮೆ ಮಾಡಿಕೊಳ್ಳುವ ಮೂಲಕ ಆರ್ಥಿಕ ನಷ್ಠವನ್ನು ಸ್ವಲ್ಪಮಟ್ಟಿಗಾದರೂ ಸರಿದೂಗಿಸಿಕೊಳ್ಳಬಹುದಾಗಿದೆ. ಹಾಗಾಗಿ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕು.

-ಶಿವನಗೌಡ ಬಿರಾದಾರ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ