ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್‌ನಿಂದ 84 ಸಾವಿರ ಕೃತಕ ಅಂಗಾಂಗ ವಿತರಣೆ: ಡಾ.ಶಾಂತಾರಾಮ ಶೆಟ್ಟಿ

KannadaprabhaNewsNetwork |  
Published : Jun 30, 2024, 12:47 AM IST
ಡಾ.ಶಾಂತಾರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವರ್ಷದಲ್ಲಿ ಅರ್ಹ ಇಬ್ಬರು ವ್ಯಕ್ತಿಗಳಿಗೆ ಕೃತಕ ಕಾಲು ಒದಗಿಸಲು ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ನೆರವು ನೀಡಲಾಗುವುದು ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಈ ಸಂದರ್ಭ ಪ್ರಕಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ವತಿಯಿಂದ ಕಳೆದ 50 ವರ್ಷಗಳಲ್ಲಿ ಒಟ್ಟು 84 ಸಾವಿರ ಕೃತಕ ಕಾಲು ಸೇರಿದಂತೆ ಕೃತಕ ಅಂಗಾಂಗ ವಿತರಿಸಲಾಗಿದೆ. ಇದರಲ್ಲಿ ಶೇ.80 ಜನರಿಗೆ ವಿವಿಧ ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ ಪೂರ್ತಿ ಉಚಿತವಾಗಿ ಸೌಲಭ್ಯ ಒದಗಿಸಲಾಗಿದೆ ಎಂದು ಸೆಂಟರ್‌ನ ನಿರ್ದೇಶಕ, ಹೆಸರಾಂತ ಮೂಳೆ ತಜ್ಞ ಡಾ.ಶಾಂತಾರಾಮ ಶೆಟ್ಟಿ ತಿಳಿಸಿದರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಖ್ಯಾತ ವೇಗದ ಓಟಗಾರ ಹುಸೇನ್ ಬೋಲ್ಟ್ ದಾಖಲೆಗೆ ಸಮವಾಗಿ ಕೃತಕ ಕಾಲುಗಳಲ್ಲಿ ಓಡಬಲ್ಲರು. ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಗೆದ್ದ ಉಸೇನ್ ಬೋಲ್ಟ್ 100 ಮೀ. ಓಟವನ್ನು 9.58 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ದಕ್ಷಿಣ ಆಫ್ರಿಕಾದ ಆಸ್ಕರ್ ಪಿಸ್ಟೋರಿಸ್ ಕೃತಕ ಕಾಲು ಬಳಸಿ 11 ಸೆಕೆಂಡ್‌ಗಳಲ್ಲಿ ಈ ದೂರವನ್ನು ಕ್ರಮಿಸಿ ದಾಖಲೆ ಬರೆದಿದ್ದಾರೆ. ಖ್ಯಾತ ನೃತ್ಯ ಕಲಾವಿದೆ ಸುಧಾಚಂದ್ರ ಅವರು ಕೃತಕ ಕಾಲು ಧರಿಸಿ ನಿರಂತರ ಒಂದೂವರೆ ತಾಸು ನೃತ್ಯ ಕಾರ್ಯಕ್ರಮ ನೀಡಬಲ್ಲರು. ಅಂತಹ ಸುಧಾರಿತ ಕೃತಕ ಕಾಲುಗಳ ಆವಿಷ್ಕಾರ ಆಗಿದೆ ಎಂದು ಉದಾಹರಣೆ ಸಹಿತ ಡಾ.ಶಾಂತಾರಾಮ ಶೆಟ್ಟಿ ವಿವರಿಸಿದರು.

ವೆನ್ಲಾಕ್ ಕೇಂದ್ರದಲ್ಲಿ ಬಹುಪಯೋಗಿ ಅಪ್ಪರ್ ಲಿಂಬ್ (ಕೃತಕ ಕಾಲಿನ ತೊಡೆ ಸೇರಿದಂತೆ) ಅಂಗಾಂಗಗಳ ತಯಾರಿಕೆ ಮತ್ತು ಪೂರೈಕೆ ನಮ್ಮ ಮುಂದಿನ ಕನಸು. ಆದರೆ ಈ ಯೋಜನೆ ಅತ್ಯಂತ ದುಬಾರಿಯಾಗಿದ್ದು, ಪರಿಣಿತ ತಂತ್ರಜ್ಞರ ಕೊರತೆ ಕೂಡ ಇದೆ. ಪ್ರಸ್ತುತ, ಜೈಪುರ, ಮುಂಬೈ ಕೊಲ್ಕತ್ತ ಸಹಿತ ದೇಶದ ಸುಮಾರು ನಾಲ್ಕು ಕೇಂದ್ರಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಪ್ರಸ್ತುತ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಬಹುಪಯೋಗಿ ಕೃತಕ ಕಾಲುಗಳನ್ನು ಲಯನ್ಸ್ ಲಿಂಬ್ ಸೆಂಟರ್‌ನಲ್ಲಿ ಉತ್ಪಾದಿಸಲಾಗುತ್ತಿದೆ. ಕೃತಕ ಕಾಲಿನ ಆವಶ್ಯಕತೆ ಇರುವ ಆರ್ಥಿಕವಾಗಿ ತುಂಬ ಕಷ್ಟದಲ್ಲಿ ಇರುವವರು ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಇತ್ತೀಚಿಗೆ ಅಪಘಾತಗಳಲ್ಲಿ ಕಾಲು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚು. ದೇಶದಲ್ಲಿ ನಾಲ್ಕು ನಿಮಿಷಕ್ಕೆ ಒಬ್ಬರು ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಕುಡಿತದಿಂದ ಆಗುವ ಅಪಘಾತ ಅಧಿಕ .ಈ ಬಗ್ಗೆ ಯುವ ಜನರಲ್ಲಿ ಅಗತ್ಯವಿದೆ ಎಂದು ಹೇಳಿದರು.

ಪ್ರೆಸ್‌ಕ್ಲಬ್‌ನಿಂದ ನೆರವು: ವರ್ಷದಲ್ಲಿ ಅರ್ಹ ಇಬ್ಬರು ವ್ಯಕ್ತಿಗಳಿಗೆ ಕೃತಕ ಕಾಲು ಒದಗಿಸಲು ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ನೆರವು ನೀಡಲಾಗುವುದು ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಈ ಸಂದರ್ಭ ಪ್ರಕಟಿಸಿದರು.

ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ಕೋಶಾಧಿಕಾರಿ ಡಾ.ಕೆ. ಆರ್.ಕಾಮತ್, ವ್ಯವಸ್ಥಾಪಕ ಸುರೇಶ್ ಶೆಟ್ಟಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಇದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು