ಕನ್ನಡಪ್ರಭ ವಾರ್ತೆ ಕುಮಟಾ
ಮನುಷ್ಯ ಪ್ರತಿಯೊಂದು ವಿಷಯದಲ್ಲೂ ಭೂಮಿಗೆ, ಪ್ರಕೃತಿಗೆ ಅವಲಂಬಿತನಾಗಿದ್ದಾನೆ. ಭೂಮಿಗೆ ಹಾನಿ ಮಾಡದೇ ಮನುಷ್ಯನ ಅವಶ್ಯಕತೆಗಳು ತೀರದಾಗಿದೆ. ಹೀಗಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ, ಅವರ ಅವಶ್ಯಕತೆಗೆ ತಕ್ಕಂತೆ ಭೂಮಿಯ ಮೇಲೆ ಒತ್ತಡ ಮತ್ತು ಹಾನಿ ಹೆಚ್ಚದಂತೆ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಹೊನ್ನಾವರ ಅರಣ್ಯ ವಿಭಾಗದ ಡಿಎಫ್‌ಒ ಯೋಗೀಶ ಸಿ.ಕೆ. ತಿಳಿಸಿದರು.ಅರಣ್ಯ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಅರ್ಥಪೂರ್ಣವಾಗಿ ಬದುಕಬೇಕಾದರೆ ಸುತ್ತಲಿನ ಪರಿಸರ ಉತ್ತಮವಾಗಿರಬೇಕು. ಪ್ರಕೃತಿಯ ಜತೆ ಸಾಮರಸ್ಯದಿಂದ ಇರಬೇಕೇ ಹೊರತು ಅದಕ್ಕೆ ಭಾರವಾಗಿ ಬದುಕಬಾರದು ಎಂದರು.ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದ್ದು, ಮಾಲಿನ್ಯದ ದುಷ್ಪರಿಣಾಮದ ಬಗ್ಗೆ ನಿರ್ಲಕ್ಷ್ಯ ಹೆಚ್ಚಿದೆ. ಆದ್ದರಿಂದ ಪ್ರತಿ ಮನೆಯಲ್ಲೂ ಪರಿಸರ ಜಾಗೃತಿಯ ಪಾಠಶಾಲೆಯಂತೆ ತಿಳಿವಳಿಕೆ ಮೂಡಿಸುವ ಹೊಣೆಯನ್ನು ವಿದ್ಯಾರ್ಥಿಗಳು ಹೊರಬೇಕು ಎಂದರು. ಎಸಿಎಫ್ ಜಿ. ಲೋಹಿತ ಮಾತನಾಡಿ, ಪರಿಸರದಲ್ಲಿ ಗಾಳಿ, ನೀರು, ಆಹಾರ ಎಲ್ಲವೂ ಕಲುಷಿತವಾಗಿದೆ. ವಾತಾವರಣದ ಉಷ್ಣಾಂಶ ಏರಿಕೆಯಾಗಿದೆ. ಕಡಲತೀರ ಪ್ರದೇಶಗಳು ಹೆಚ್ಚೆಚ್ಚು ಆಮ್ಲೀಯವಾಗುತ್ತಿದ್ದು, ಇದೆಲ್ಲದರ ನೇರ ಪರಿಣಾಮವನ್ನು ಮಾನವ ಬದುಕಿನ ಮೇಲೆ ಕಾಣಬಹುದಾಗಿದೆ. ಸಮುದ್ರ ಎಷ್ಟೊಂದು ಕಲುಷಿತವಾಗಿದೆಯೆಂದರೆ ಸಮುದ್ರ ತಟಕ್ಕೆ ಬಂದು ಸತ್ತು ಬೀಳುವ ಡಾಲ್ಫಿನ್, ಆಮೆಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳೇ ತುಂಬಿರುತ್ತದೆ. ಇತಿಮಿತಿಯಿಲ್ಲದ ಇಂಧನ ಬಳಕೆ ಮತ್ತು ಹಸಿರು ಪರಿಸರದ ನಾಶ ಭೂಭವಿಷ್ಯವನ್ನು ಆತಂಕದೆಡೆಗೆ ದೂಡುತ್ತಿದೆ ಎಂದರು.
ಎಸಿಎಫ್ ಪ್ರವೀಣಕುಮಾರ ಬಸ್ರೂರ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎನ್.ಕೆ. ನಾಯಕ, ಡಾ. ಎನ್.ಡಿ. ನಾಯಕ, ಆರ್‌ಎಫ್‌ಒ ಎಸ್.ಟಿ. ಪಟಗಾರ ಮಾತನಾಡಿದರು.ನಿಧಿ ಮತ್ತು ಸ್ನೇಹಾ ಪ್ರಾರ್ಥಿಸಿದರು. ಡಾ. ಪ್ರಕಾಶ ಪಂಡಿತ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶೇತಾ ಭಟ್ ಹಾಗೂ ರಿಜಾ ಖಾಜಿ ನಿರ್ವಹಿಸಿದರು. ಪ್ರೊ. ಸುರೇಖಾ ಜಿ. ನಾಯ್ಕ ವಂದಿಸಿದರು. ಕಾರ್ಯಕ್ರಮದ ಅರಂಭದಲ್ಲಿ ಕಾಲೇಜಿನ ಬಯೋ ಕ್ಲಬ್, ಎನ್‌ಸಿಸಿ, ಎನ್ಎಸ್ಎಸ್, ರೋವರ್ ಸ್ಕೌಟ್ಸ್ ಮತ್ತು ರೆಡ್ ಕ್ರಾಸ್ ಸಂಘಟನೆಯ ಅಡಿಯಲ್ಲಿ ಅರಣ್ಯ ಇಲಾಖೆ ನೀಡಿದ ಗಿಡಗಳನ್ನು ಕಾಲೇಜು ಆವಾರದಲ್ಲಿ ನೆಟ್ಟು ನೀರೆರೆಯಲಾಯಿತು.