ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

KannadaprabhaNewsNetwork | Published : Jun 30, 2024 12:47 AM
Follow Us

ಸಾರಾಂಶ

ಟಿಸಿ ಸುಟ್ಟ 48 ಗಂಟೆಗಳಲ್ಲಿ ವಿತರಿಸಬೇಕು. ನಿರಂತರ ಜ್ಯೋತಿ ಯೋಜನೆಯಲ್ಲಿ ತೋಟದ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ರೈತರಿಗೆ ವಿತರಿಸುವ ಟಿಸಿ ವಿತರಣೆಯಲ್ಲಿ ತಾರತಮ್ಯ ಹಾಗೂ ಅಧಿಕಾರಿಗಳ ಮಲತಾಯಿ ಧೋರಣೆ ಖಂಡಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಬೆಸ್ಕಾಂ ಉಪ ವಿಭಾಗದಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿರುವ ಲೈನ್‌ಗಳಿಗೆ ಪರಿಕರ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಉಗ್ರಾಣದ ಅಧಿಕಾರಿ ರೈತರಿಗೆ ಟಿಸಿ ವಿತರಣೆಯಲ್ಲಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಕಚೇರಿಗೆ ಬರುವ ರೈತರನ್ನು ಧಮ್ಕಿ ಹಾಕಿ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಟಿಸಿ ಸುಟ್ಟ ನಂತರ ಕಚೇರಿಯಲ್ಲಿ ದಾಖಲೆ ಸಿದ್ದಪಡಿಸಿ ಟಿಸಿ ಕೊಡಲು 15 ರಿಂದ 20 ದಿನಗಳು ಬೇಕಾಗುತ್ತದೆ. ಇದರಿಂದ ಬೆಳೆ ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಟಿಸಿ ಸುಟ್ಟ 48 ಗಂಟೆಗಳಲ್ಲಿ ವಿತರಿಸಬೇಕು. ನಿರಂತರ ಜ್ಯೋತಿ ಯೋಜನೆಯಲ್ಲಿ ತೋಟದ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಖಾಸಗೀಕರಣಗೊಳಿಸುವ ಹುನ್ನಾರ ಮಾಡುತ್ತಿವೆ. ವಿದ್ಯುತ್ ಖಾಸಗಿಕರಣದಿಂದ ರೈತರು ಬಂಡವಾಳಶಾಹಿಗಳ ನಡುವೆ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ವಿದ್ಯುತ್ ಖಾಸಗಿಕರಣ ನಿರ್ಧಾರ ಕೈ ಬಿಡುವ ಮೂಲಕ ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಿ ಈ ಹಿಂದೆ ಇದ್ದ ರೈತರಿಂದ ವಂತಿಕೆ ಪಡೆದು ವಿದ್ಯುತ್ ಪರಿಕರ ನೀಡಬೇಕೆಂದು ಒತ್ತಾಯಿಸಿದ್ದು, ಗ್ರಾಮೀಣ ಭಾಗದಲ್ಲಿ ಹಗಲಲ್ಲಿಯೇ ಬೀದಿ ದೀಪಗಳು ಉರಿಯುತ್ತಿದ್ದು, ಇದರಿಂದ ವಿದ್ಯುತ್ ನಷ್ಟವಾಗುತ್ತಿದೆ, ಗ್ರಾ.ಪಂ.ಗೆ ನೋಟಿಸ್ ನೀಡಿ ದೀಪಗಳಿಗೆ ಕಂಟ್ರೋಲರ್ ಅಳವಡಿಸುವಂತೆ ಆಗ್ರಹಿಸಿದ್ದಾರೆ.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕ ಅಧ್ಯಕ್ಷ ಮಂಜುನಾಥ, ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ದಾನಸೂರ ನಾಯಕ. ಎಸ್ ಟಿ ಚಂದ್ರಣ್ಣ, ಕನಕ ಶಿವಮೂರ್ತಿ, ಮೇಸ್ತ್ರಿ ಪಾಪಯ್ಯ, ಮಹೇಶ್, ರಾಯಪುರ ಬಸವರಾಜ, ಈರಪ್ಪ, ಸಣ್ಣಪ್ಪ, ದೊಡ್ಡ ಪಾಪಯ್ಯ, ನಾಗರಾಜ, ವೀರೇಶ, ಕಾಮಯ್ಯ ಇದ್ದರು.