ನಗರದಲ್ಲಿ ಕಳೆದ ಆರು ತಿಂಗಳಲ್ಲಿ 85 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಯಾವುದು ಪ್ರಾಣಹಾನಿ ಸಂಭವಿಸಿಲ್ಲ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ಚಿತ್ರದುರ್ಗ : ನಗರದಲ್ಲಿ ಕಳೆದ ಆರು ತಿಂಗಳಲ್ಲಿ 85 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಯಾವುದು ಪ್ರಾಣಹಾನಿ ಸಂಭವಿಸಿಲ್ಲ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ನಗರದ ಹೊರವಲಯ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಡೆಂಘೀ ಅಡ್ವಕೆಸಿ (ಸಮರ್ಥನಾ) ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮ ಪಂಚಾಯತಿ ಸದಸ್ಯರು ಮಾಹಿತಿ ಪಡೆದು ಡೆಂಘೀ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಇಲಾಖೆ ಮಾರ್ಗದರ್ಶನದಂತೆ ಪ್ರತಿ ಶುಕ್ರವಾರ ಎಲ್ಲಾ ಮನೆಗಳಲ್ಲಿ ಒಣ ದಿನ ಆಚರಣೆ ಮಾಡುವುದು. ಅಂದರೆ ಎಲ್ಲಾ ಮನೆಗಳಲ್ಲಿ ನೀರು ಸಂಗ್ರಹಿಸುವ ಪರಿಕರಗಳಾದ ಡ್ರಮ್, ಬ್ಯಾರೆಲ್, ತೊಟ್ಟಿ ಸ್ವಚ್ಛವಾಗಿ ತೊಳೆದು ಒಣಗಿಸಿ ನಂತರ ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಬೇಕು. ಹೊಸದಾಗಿ ನೀರು ಸಂಗ್ರಹಿಸುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ. ಡೆಂಘೀ ಪ್ರಕರಣಗಳು ಇಳಿಮುಖವಾಗುತ್ತವೆ. ಪರಿಸರ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಜವಾಬ್ದಾರಿ, ಘನ ತ್ಯಾಜ್ಯ ವಸ್ತುಗಳ ಸರಿಯಾದ ನಿರ್ವಹಣೆಯ ಆರೋಗ್ಯಕರ ಅಭ್ಯಾಸಗಳ ಎಲ್ಲರೂ ರೂಢಿಸಿಕೊಳ್ಳಬೇಕೆಂದರು.
ಸಾಂಕ್ರಾಮಿಕ ರೋಗಗಳು ಕಲುಷಿತ ನೀರು, ಆಹಾರ ಸೇವನೆಯಿಂದ, ವೈಯಕ್ತಿಕ ಸ್ವಚ್ಚತಾ ಕೊರತೆ, ಕೀಟಗಳಿಂದ ಹರಡುತ್ತವೆ. ಸಾಮಾನ್ಯವಾಗಿ ಸೊಳ್ಳೆಗಳ ಕಡಿತದಿಂದ ಮಲೇರಿಯಾ ಡೆಂಘೀ, ಚಿಕನ್ ಗುನಿಯ, ಮೆದುಳು ಜ್ವರ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಿಳಿ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದರಿಂದ ಸಂತತಿ ಹೆಚ್ಚುತ್ತದೆ. ಸೊಳ್ಳೆಗಳ ನಾಶದ ಕಡೆ ಗಮನ ಕೇಂದ್ರೀಕರಿಸುವುದು ಅಗತ್ಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಗಣೇಶ್ ಮಾತನಾಡಿ, ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಲಿದೆ. ಸಾಂಕ್ರಮಿಕ ರೋಗ ತಡೆಗಟ್ಟಲು ಶುದ್ಧ ಕುಡಿಯುವ ನೀರಿನ ಪೂರೈಕೆ, ಪರಿಸರ ನೈರ್ಮಲ್ಯ ಫನತ್ಯಾಜ್ಯ ಸರಿಯಾದ ವಿಲೇವಾರಿ, ಸೊಳ್ಳೆ ಸಂತಾನೋತ್ಪತ್ತಿ ತಾಣ ನಾಶಪಡಿಸಲು ಅಗತ್ಯ ಸಹಕಾರ ನೀಡಲಿದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ ರೆಡ್ಡಿ ಮಾತನಾಡಿ, ಸೊಳ್ಳೆಗಳ ಜೀವನ ಚಕ್ರ ಹಾಗೂ ಸೊಳ್ಳೆಗಳ ನಿಯಂತ್ರಣದಲ್ಲಿ ಇಲಾಖೆಯಲ್ಲಿ ದೊರೆಯುವ ಸೇವಾ ಸೌಲಭ್ಯಗಳನ್ನು ಸಭೆಯಲ್ಲಿ ವಿವರಿಸಿದರು. ಸಾಂಕ್ರಾಮಿಕ ರೋಗ ತಡೆಗೆ ಗ್ರಾಮೀಣರು ಹೆಚ್ಚು ಆಸಕ್ತಿ ವಹಿಸಬೇಕು. ನಿಯಂತ್ರಣ ಪ್ರತಿ ಮನೆಯಿಂದಲೇ ಆರಂಭವಾಗಬೇಕೆಂದು ಹೇಳಿದರು.
ಡೆಂಘೀ ನಿಯಂತ್ರಣ ಮಾಹಿತಿ ಕರಪತ್ರ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀರಮ್ಮ, ಪಿಡಿಓ ಸಂತೋಷ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ್, ನವೀನ್, ಪ್ರವೀಣ್, ಸಮುದಾಯ ಆರೋಗ್ಯಾಧಿಕಾರಿ ಜಯಲತಾ, ಮಹಿಳಾ ಮಕ್ಕಳ ಇಲಾಖೆಯ ಮೇಲ್ವಿಚಾರಕ ಮಧುಮಾಲತಿ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.