ಮಹಾದಾಸೋಹದಲ್ಲಿ ಇಂದು 85 ಕ್ವಿಂಟಲ್ ಗೋದಿ ಹುಗ್ಗಿ!

KannadaprabhaNewsNetwork |  
Published : Jan 18, 2026, 02:45 AM IST
17ಕೆಪಿಎಲ್ 21 ರೋಡ್ ರೂಲರ್ ಮೂಲಕ ಬೆಲ್ಲ ಪುಡಿ ಮಾಡುತ್ತಿರುವುದು. 17ಕೆಪಿಎಲ್22 ಹಮಾಲರು ಅಕ್ಕಿಯ ಮೂಟೆಯನ್ನು ಹೊತ್ತುಕೊಂಡು ಬಂದು ದಾನ ನೀಡುತ್ತಿರುವುದು. | Kannada Prabha

ಸಾರಾಂಶ

ಅಮಾವಾಸ್ಯೆಯಂದು ಬರೋಬ್ಬರಿ 85 ಕ್ವಿಂಟಲ್ ಗೋದಿ ಹುಗ್ಗಿ ಮಾಡಲಾಗುತ್ತದೆ. 50 ಕ್ವಿಂಟಲ್ ಬೆಲ್ಲ, 25 ಕ್ವಿಂಟಲ್ ಕುಟ್ಟಿದ ಗೋದಿ, ಕಡ್ಲೆಬೇಳೆ, ಕೊಬ್ಬರಿ ಸೇರಿದಂತೆ ಇತರೆ 10 ಕ್ವಿಂಟಲ್ ಸೇರಿದಂತೆ ಬರೋಬ್ಬರಿ 85 ಕೆಜಿ ಗೋದಿ ಹುಗ್ಗಿಯನ್ನು 11 ಕೊಪ್ಪರಿಗೆಯಲ್ಲಿ ಮಾಡಲಾಗುತ್ತದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹದ ಕೊನೆಯ ದಿನವಾದ ಭಾನುವಾರ (ಅಮಾವಾಸ್ಯೆ) ಬರೋಬ್ಬರಿ 11 ಕೊಪ್ಪರಿಗೆ (85 ಕ್ವಿಂಟಲ್‌) ಗೋದಿ ಹುಗ್ಗಿ ಮಾಡಲು ಸಿದ್ಧತೆ ನಡೆದಿದ್ದು, ಇದಕ್ಕಾಗಿ 50 ಕ್ವಿಂಟಲ್ ಬೆಲ್ಲವನ್ನು ರೋಡ್ ರೋಲರ್ ಮೂಲಕ ಪುಡಿ ಮಾಡಲಾಗಿದೆ.

ಗವಿಮಠದ ವೃದ್ಧಾಶ್ರಮದ ಏರಿಯಾದಲ್ಲಿರುವ ರಸ್ತೆಯಲ್ಲಿ ಕೆಳಗೆ ತಾಡಪತ್ರಿ ಹಾಕಿ, ಅದರ ಮೇಲೆ ಬೆಲ್ಲದ ಮೂಟೆಯ ಚೀಲ ಹಾಕಿ ಅದರ ಮೇಲೆ ಪುನಃ ತಾಡಪತ್ರೆ ಹಾಕಿ ರೋಡ್ ರೋಲರ್ ಮೂಲಕ 50 ಕ್ವಿಂಟಲ್ ಬೆಲ್ಲ ಪುಡಿ ಮಾಡಲಾಯಿತು. ಕಳೆದ 10 ವರ್ಷಗಳಿಂದಲೂ ಬೆಲ್ಲವನ್ನು ಪುಡಿ ಮಾಡಲು ಈ ರೀತಿ ರೋಡ್‌ ರೋಲರ್‌ ಬಳಸಲಾಗುತ್ತಿದೆ.

85 ಕ್ವಿಂಟಲ್ ಗೋದಿ ಹುಗ್ಗಿ:ಅಮಾವಾಸ್ಯೆಯಂದು ಬರೋಬ್ಬರಿ 85 ಕ್ವಿಂಟಲ್ ಗೋದಿ ಹುಗ್ಗಿ ಮಾಡಲಾಗುತ್ತದೆ. 50 ಕ್ವಿಂಟಲ್ ಬೆಲ್ಲ, 25 ಕ್ವಿಂಟಲ್ ಕುಟ್ಟಿದ ಗೋದಿ, ಕಡ್ಲೆಬೇಳೆ, ಕೊಬ್ಬರಿ ಸೇರಿದಂತೆ ಇತರೆ 10 ಕ್ವಿಂಟಲ್ ಸೇರಿದಂತೆ ಬರೋಬ್ಬರಿ 85 ಕೆಜಿ ಗೋದಿ ಹುಗ್ಗಿಯನ್ನು 11 ಕೊಪ್ಪರಿಗೆಯಲ್ಲಿ ಮಾಡಲಾಗುತ್ತದೆ.

ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಮತ್ತು ಆಗಮನ ಪ್ರಮಾಣವನ್ನಾಧರಿಸಿ ಮತ್ತಷ್ಟು ಸಿದ್ಧ ಮಾಡಲಾಗುತ್ತದೆ. ಗೋದಿ ಹುಗ್ಗಿಯ ಜತೆಗೆ ಹಾಲು, ತುಪ್ಪ, ಬದನೇಕಾಯಿ ಪಲ್ಯೆ, ಅನ್ನ, ಸಾಂಬರ್, ಉಪ್ಪಿನಕಾಯಿ, ಪುಡಿ ಚಟ್ನಿ ಇರುತ್ತದೆ. ಎರಡು ಕೊಪ್ಪರಿಗೆ ಬದನೇ ಕಾಯಿ ಪಲ್ಯ ಮಾಡಲಾಗುತ್ತದೆ. ನಾಲ್ಕು ಕೊಪ್ಪರಿಗೆ ಸಾಂಬರ್ ಮಾಡಲಾಗುತ್ತದೆ. ಅನ್ನವನ್ನು ಬೇಕಾದಷ್ಟು ಮಾಡಲಾಗುತ್ತದೆ. ನೂರೈವತ್ತು ಕ್ವಿಂಟಲ್ ಗೂ ಅಧಿಕ ಅಕ್ಕಿ ಬಳಕೆಯಾಗುವ ಸಾಧ್ಯತೆ ಇದೆ.

ಮಧ್ಯರಾತ್ರಿಯಿಂದಲೇ ಶುರು:ಗೋದಿ ಹುಗ್ಗಿ ಮಾಡುವ ಕಾರ್ಯ ಶನಿವಾರ ಮಧ್ಯ ರಾತ್ರಿಯಿಂದಲೇ ಪ್ರಾರಂಭವಾಗುತ್ತದೆ. ಪ್ರತಿ ವರ್ಷವೂ ಕೊಪ್ಪಳ ತಾಲೂಕಿನ ಹಲಿಗೇರಿ ಮತ್ತು ಮೈನಳ್ಳಿ ಗ್ರಾಮದ ನಾಲ್ಕು ನೂರಕ್ಕೂ ಹೆಚ್ಚು ಬಾಣಸಿಗರು ಗೋದಿ ಹುಗ್ಗಿ ಮತ್ತು ಅನ್ನ,ಸಾಂಬರ್, ಬದನೇಕಾಯಿ ಪಲ್ಯ ಸಿದ್ಧ ಮಾಡುತ್ತಾರೆ.

ಹಮಾಲಿ ಕಾರ್ಮಿಕರಿಂದ ದಾನ: ಅವರು ನಿತ್ಯವೂ ಹಮಾಲಿ ಮಾಡಿಯೇ ಜೀವನ ನಡೆಸಬೇಕು. ಆದರೂ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹಕ್ಕೆ ಎಸ್ ವಿಟಿ ಅಂಗಡಿಯ ಹಮಾಲಿ ಕಾರ್ಮಿಕರು 11 ಅಕ್ಕಿ ಮೂಟೆ ದಾನ ನೀಡಿದ್ದಾರೆ. 25 ಕೆಜಿ ಅಕ್ಕಿ ಮೂಟೆಗಳನ್ನು ತಾವೇ ಹೊತ್ತುಕೊಂಡು ಬಂದು ಮಹಾದಾಸೋಹಕ್ಕೆ ನೀಡಿದರು.

ಮಹಾದಾಸೋಹದಲ್ಲಿ ಕೊನೆಯ ದಿನವಾದ ಅಮಾವಾಸ್ಯೆಯಂದು ಪ್ರತಿ ವರ್ಷವೂ ಗೋದಿ ಹುಗ್ಗಿ ಮಾಡುವ ಸಂಪ್ರದಾಯ ಇದ್ದು, ಈ ವರ್ಷ ಕಳೆದ ವರ್ಷಕ್ಕಿಂತ ಎರಡು ಕೊಪ್ಪರಿಗೆ ಗೋದಿ ಹುಗ್ಗಿಯನ್ನು ಹೆಚ್ಚಿಗೆ ಮಾಡಲಾಗುತ್ತದೆ. 11 ಕೊಪ್ಪರಿಗೆ ಗೋದಿ ಹುಗ್ಗಿ ಮಾಡಲು ಸಿದ್ಧ ಮಾಡಿಕೊಳ್ಳಲಾಗಿದ್ದು, ಅಗತ್ಯವಿದ್ದರೆ ಮತ್ತಷ್ಟು ಮಾಡಲು ವ್ಯವಸ್ಥೆ ಇಟ್ಟುಕೊಳ್ಳಲಾಗಿದೆ ಎಂದು ಮುಖಂಡರಾದ ಬಸವರಾಜ ಪುರದ ತಿಳಿಸಿದ್ದಾರೆ.

ಬೆಲ್ಲ ಪುಡಿ ಮಾಡುವುದೇ ದೊಡ್ಡ ಸವಾಲು ಆಗಿದ್ದಾಗ ರೋಡ್ ರೋಲರ್ ಮೂಲಕ ಮಾಡುವುದನ್ನು ಪ್ರಾರಂಭಿಸಿದ ಮೇಲೆ ಅತೀ ಸುಲಭವಾಗಿದೆ. ಕೇವಲ ನಾಲ್ಕು ಗಂಟೆಯಲ್ಲಿ 50 ಕ್ವಿಂಟಲ್ ಬೆಲ್ಲ ಪುಡಿ ಮಾಡಲಾಗುತ್ತದೆ ಎಂದು ಉಸ್ತುವಾರಿ ರಾಜೇಂದ್ರಕುಮಾರ ಶೆಟ್ಟರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಕನೂರು ಪಪಂ: ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ವಾಪಸ್‌?
ಹರ್ಡೇಕರ್ ಮಂಜಪ್ಪನವರು ಇಂದಿನ ಪೀಳಿಗೆಗೆ ಮಾದರಿ: ಕೊಟ್ಟೂರು ಬಸವಲಿಂಗ ಶ್ರೀ