ಕನ್ನಡಪ್ರಭ ವಾರ್ತೆ ಮಂಗಳೂರುಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘವು ಕಳೆದ 85 ವರ್ಷಗಳಿಂದ ಸಮುದಾಯದ ಪ್ರಗತಿಗೆ ತನ್ನದೇ ಕೊಡುಗೆ ನೀಡಿದೆ. ಆರೋಗ್ಯ ತಪಾಸಣೆ ಸೇರಿದಂತೆ ನಿರಂತರವಾಗಿ ವಿವಿಧ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ ಹೇಳಿದ್ದಾರೆ.ನಗರದ ಸಿ.ವಿ. ನಾಯಕ್ ಸಭಾಂಗಣದಲ್ಲಿ ಭಾನುವಾರ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ‘ಮೆಡಿಕಲ್ ಮಿಷನ್’ನ 85ನೇ ವರ್ಷಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೇತ್ರ ತಜ್ಞ ಡಾ. ಸುಜೀರ್ ಮಾತನಾಡಿ, ಬ್ಯಾಂಕಿಂಗ್, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಎ.ಎಸ್. ಪೈ ಅವರ ಕೊಡುಗೆ ಅನನ್ಯ. ಅವರಿಂದಾಗಿ ಸಮುದಾಯದಲ್ಲಿ ಉದ್ಯಮಿಗಳು, ವೈದ್ಯರು ಬೆಳೆಯಲು ಸಾಧ್ಯವಾಗಿದೆ ಎಂದರು.
ಡಾ. ವಾಮನ ಶೆಣೈ ಮಾತನಾಡಿ, ಜನರ ನಂಬಿಕೆಗೆ ತಕ್ಕಂತೆ ಜಿಎಸ್‌ಬಿ ಸಮಾಜದ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದು, ಜನರ ನಂಬಿಕೆ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗಿದೆ ಎಂದು ಹೇಳಿದರು.ಕೆಎಂಸಿ ಮೆಡಿಕಲ್ ಕಾಲೇಜಿನ ನಿವೃತ್ತ ಡೀನ್ ಎಂ. ವೆಂಕಟರಾಯ ಪ್ರಭು ಮಾತನಾಡಿದರು.
ಸಮಾರಂಭದಲ್ಲಿ ಸಮುದಾಯದ ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.