ಪಹಣಿಗೆ ಆಧಾರ್‌ ಲಿಂಕ್‌: ಎರಡೇ ತಿಂಗಳಲ್ಲಿ ಶೇ.86 ರಷ್ಟು ಪೂರ್ಣ

KannadaprabhaNewsNetwork | Published : Dec 18, 2024 12:49 AM

ಸಾರಾಂಶ

ದ.ಕ.ಜಿಲ್ಲೆಯಲ್ಲಿ ಕಂದಾಯ ಇಲಾಖೆ ಮಾಹಿತಿ ಪ್ರಕಾರ ಡಿ.10ರ ವರೆಗೆ ಶೇ.85.80ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 29,01,413 ಭೂಮಾಲೀಕರು ತಮ್ಮ ಪಹಣಿಯಲ್ಲಿ ಆಧರ್‌ ಜೋಡಣೆ ಮಾಡಬೇಕಾಗಿದ್ದು, ಇಲ್ಲಿವರೆಗೆ 24,89,461 ಆರ್‌ಟಿಸಿ ಆಧಾರ್‌ಗೆ ಲಿಂಕ್‌ ಆಗಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ರೈತರ ಜಮೀನಿನ ಪಹಣಿ ಪತ್ರ(ಆರ್‌ಟಿಸಿ)ವನ್ನು ಆಧಾರ್‌ಗೆ ಲಿಂಕ್‌ ಮಾಡುವ ಕಾರ್ಯ ಎರಡೇ ತಿಂಗಳಲ್ಲಿ ಶೇ.86 ರಷ್ಟು ಪೂರ್ಣಗೊಂಡಿದೆ. ಆರ್‌ಟಿಸಿಯನ್ನು ಆಧಾರ್‌ಗೆ ಲಿಂಕ್‌ ಕಲ್ಪಿಸಲು ನಿರ್ದಿಷ್ಟ ಗಡುವು ವಿಧಿಸಿಲ್ಲವಾದರೂ ಕೆಲವೇ ತಿಂಗಳಲ್ಲಿ ಇದರಲ್ಲಿ ಶೇಕಡಾ 100 ಗುರಿ ಸಾಧಿಸಲು ಎಲ್ಲ ರೀತಿಯ ಪ್ರಯತ್ನ ಜಿಲ್ಲಾಡಳಿತದಿಂದ ನಡೆಯುತ್ತಿದೆ. ಭೂಮಾಲೀಕರ ಆರ್‌ಟಿಸಿಯಲ್ಲಿ ಆಧಾರ್‌ ಲಿಂಕ್‌ ಜೋಡಣೆ ಬಗ್ಗೆ ರಾಜ್ಯ ಸರ್ಕಾರ ಆರು ತಿಂಗಳ ಮೊದಲೇ ಆದೇಶ ಹೊರಡಿಸಿತ್ತು. ಆದರೆ ನಿಗದಿತ ಪ್ರಗತಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಸೆಪ್ಟೆಂಬರ್‌ನಲ್ಲಿ ಜಿಲ್ಲಾಡಳಿತ ಮತ್ತೆ ಪ್ರಕಟಣೆ ಹೊರಡಿಸಿ ಎರಡು ತಿಂಗಳಲ್ಲಿ ಶೇ.ನೂರು ಪ್ರಗತಿ ದಾಖಲಿಸುವಂತೆ ಸೂಚಿಸಿತ್ತು. ಏನೇನು ಪ್ರಗತಿ:

ದ.ಕ.ಜಿಲ್ಲೆಯಲ್ಲಿ ಕಂದಾಯ ಇಲಾಖೆ ಮಾಹಿತಿ ಪ್ರಕಾರ ಡಿ.10ರ ವರೆಗೆ ಶೇ.85.80ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 29,01,413 ಭೂಮಾಲೀಕರು ತಮ್ಮ ಪಹಣಿಯಲ್ಲಿ ಆಧರ್‌ ಜೋಡಣೆ ಮಾಡಬೇಕಾಗಿದ್ದು, ಇಲ್ಲಿವರೆಗೆ 24,89,461 ಆರ್‌ಟಿಸಿ ಆಧಾರ್‌ಗೆ ಲಿಂಕ್‌ ಆಗಿದೆ.

ಈ ಪೈಕಿ ಆರ್‌ಟಿಸಿಯ ಕಲಂ ನಂಬರು 9 ರಲ್ಲಿ ಈ ಹಿಂದೆಯೇ 8,27,535 ಮಂದಿ ಆಧಾರ್‌ ಜೋಡಣೆ ಮಾಡಿದ್ದಾರೆ. ಇದರಲ್ಲಿ ಗ್ರಾಮ ಆಡಳಿತಾಧಿಕಾರಿಗಳ ವರದಿ ಆಧಾರದಲ್ಲಿ 2,635 ಆರ್‌ಟಿಸಿಗಳಲ್ಲಿ ಸರ್ಕಾರಿ ಭೂಮಿ ಎಂದು ನಮೂದಾಗಿದೆ. 6,910 ಆರ್‌ಟಿಸಿಗಳು ಭೂಸ್ವಾಧೀನ ಜಮೀನು ಹೊಂದಿವೆ. 14,84,972 ಆರ್‌ಟಿಸಿಗಳು ಭೂಪರಿವರ್ತನೆ(ಕನ್ವರ್ಷನ್‌) ಆಗಿದೆ. 1,18,006 ಆರ್‌ಟಿಸಿಗಳಲ್ಲಿ ಭೂಮಾಲೀಕರು ಮೃತಪಟ್ಟಿದ್ದರೂ ಅದು ವಾರಸುದಾರರ ಹೆಸರಿಗೆ ಬದಲಾವಣೆಯಾಗಿಲ್ಲದಿರುವುದು ಕಂಡುಬಂದಿದೆ. ಅಲ್ಲದೆ 49,403 ಆರ್‌ಟಿಸಿಗಳು ಭೂಮಾಲೀಕರ ಭಾವಚಿತ್ರ ರಹಿತವಾಗಿದ್ದು, ಅಲ್ಲಿ ಭಾಗಶಃ ಆಧಾರ್‌ ಜೋಡಣೆಯಾಗಿದೆ.

ರಾಜ್ಯದ 31 ಜಿಲ್ಲೆಗಳಿಗೆ ಹೋಲಿಸಿದರೆ, ಆರಂಭದಲ್ಲಿ ಕೊನೆ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ ಈಗ 16ನೇ ಕ್ರಮಾಂಕಕ್ಕೆ ಏರಿಕೆಯಾಗಿದೆ. ಇದನ್ನು ಶೀಘ್ರವೇ ಒಂದನೇ ಸ್ಥಾನಕ್ಕೆ ತಲುಪಿಸುವ ಗುರಿಯನ್ನು ಜಿಲ್ಲಾಡಳಿತ ಹಾಕಿಕೊಂಡಿದೆ.

ಆಧಾರ್‌ ಲಿಂಕ್‌ ಯಾಕೆ ಅಗತ್ಯ?: ಆಧಾರ್‌ ಜೊತೆ ಆರ್‌ಟಿಸಿ ಲಿಂಕ್‌ ಪೂರ್ಣಗೊಂಡರೆ ಮುಂದಿನ ದಿನಗಳಲ್ಲಿ ರೈತರಿಗೆ ಸರ್ಕಾರಿ ಸೌಲಭ್ಯ ಒದಗಿಸಲು ಹಾಗೂ ಅಕ್ರಮ ಖಾತಾ ಬದಲಾವಣೆ ತಡೆಗಟ್ಟಲು ಸಾಧ್ಯವಾಗಲಿದೆ. ಅಲ್ಲದೆ ಎಷ್ಟು ಸರ್ಕಾರಿ ಭೂಮಿ ಇದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬಹುದು. ಭೂಮಾಲೀಕರು ಮೃತಪಟ್ಟರೆ, ಆರ್‌ಟಿಸಿಯಲ್ಲಿ ಹೆಸರು ವಾರಸುದಾರರಿಗೆ ವರ್ಗಾಯಿಸಲು ಅನುಕೂಲವಾಗಲಿದೆ. ಮಾತ್ರವಲ್ಲ ಭೂವ್ಯಾಜ್ಯಗಳ ದಾಖಲೆಯಾಗಿಯೂ ಬಳಕೆ ಮಾಡಲು ಸಾಧ್ಯವಿದೆ. ಸರ್ಕಾರಕ್ಕೂ ರೈತರ ಆಸ್ತಿಗಳ ಬಗ್ಗೆ ನಿಖರವಾದ ಮಾಹಿತಿ ಸುಲಭದಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯೋಜನೆಗಳಿಗೆ ಆಧಾರ್‌ ಜೋಡಣೆಗೊಂಡ ಆರ್‌ಟಿಸಿಗಳನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಿದೆ ಎಂಬುದು ಗಮನಾರ್ಹ. ಆಧಾರ್‌ ಜೋಡಣೆ ರೈತರೇ ಮಾಡಬೇಕು

ಆರ್‌ಟಿಸಿಗೆ ಆಧಾರ್‌ ಜೋಡಣೆಯನ್ನು ಕಂದಾಯ ಇಲಾಖೆ ಮಾಡುತ್ತಿಲ್ಲ, ಇಲ್ಲವೇ ಸೈಬರ್‌ ಗ್ರಾಮ ಒನ್‌ಸೆಂಟರ್‌ಗಳೂ ಮಾಡುತ್ತಿಲ್ಲ. ಬದಲು ರೈತರೇ ಮಾಡಬೇಕಾಗಿದೆ. ಹೀಗಾಗಿ ಈ ಯೋಜನೆ ಆರಂಭದ ಹಂತದಲ್ಲಿ ಹಿನ್ನಡೆ ಕಂಡಿತ್ತು.

ಭೂಮಾಲೀಕರು ತಮ್ಮ ಪಹಣಿ ಪತ್ರ ಹಾಗೂ ಆಧಾರ್‌ ಕಾರ್ಡ್‌ನ್ನು ಆಧಾರ್‌ ಜೋಡಣೆಯಾಗಿರುವ ಮೊಬೈಲ್‌ ನಂಬರಿಗೆ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕಿಸಿ ಆಧಾರ್‌ ಜೋಡಣೆ ಮಾಡಿಸಿಕೊಳ್ಳಬೇಕು. ದ.ಕ.ದಲ್ಲಿ ಜಮೀನು ಹೊಂದಿ, ಬೇರೆ ರಾಜ್ಯ ಅಥವಾ ವಿದೇಶದಲ್ಲಿ ವಾಸವಿರುವ ಭೂಮಾಲೀಕರು, ಅವರ ಕುಟುಂಬಸ್ಥರು ಅಥವಾ ಸಂಬಂಧಿಕರು ಜಿಲ್ಲೆಯಲ್ಲಿದ್ದರೆ ಅವರಿಂದ ಮಾಹಿತಿ ಪಡೆದು ಗ್ರಾಮ ಆಡಳಿತಾಧಿಕಾರಿ ಮೂಲಕ ಆಧಾರ್‌ ಜೋಡಣೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ಆದೇಶ ಇರುವುದರಿಂದ ರೈತರು ತ್ವರಿತವಾಗಿ ಆರ್‌ಟಿಸಿಗೆ ಆಧಾರ್‌ ಲಿಂಕ್‌ ಮಾಡಬೇಕು. ಪ್ರಸಕ್ತ ಶೇ.86ರಷ್ಟು ಆಧಾರ್‌ಗೆ ಆರ್‌ಟಿಸಿ ಲಿಂಕ್ ಆಗಿದೆ. ಇದನ್ನು ಶೇ.ನೂರರಷ್ಟು ಮಾಡಬೇಕಾಗಿದೆ. ಬೇಗ ಲಿಂಕ್‌ ಮಾಡಿಸಿಕೊಂಡರೆ, ಸರ್ಕಾರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅನುಕೂಲವಾಗುತ್ತದೆ.

-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

Share this article