ಸಿಂಗಟಾಲೂರು ಏತ ನೀರಾವರಿ ಯೋಜನೆ । ಶೀಘ್ರ ಪರಿಹಾರ ಕೊಡದಿದ್ದರೇ ಕಚೇರಿ ಮುಂದೆ ವಿಷ ಕುಡಿದು ಆತ್ಮಹತ್ಯೆ: ರೈತರ ಎಚ್ಚರಿಕೆಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಯ ವಿವಿಧ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಂಡಿದ್ದ ಮೂರು ಗ್ರಾಮಗಳ 87 ಎಕರೆ ಜಮೀನಿಗೆ ಪರಿಹಾರ ನೀಡಿಲ್ಲ, ತಿಂಗಳೊಳಗೆ ಪರಿಹಾರ ಕೊಡದಿದ್ದರೆ ಕಚೇರಿ ಮುಂದೆ ವಿಷ ಕುಡಿದು, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಹೊಸಹಳ್ಳಿ, ಅಂಗೂರು, ಕೋಟಿಹಾಳು ಗ್ರಾಮಗಳ ವ್ಯಾಪ್ತಿಯ 83 ಎಕರೆ 78 ಸೆಂಟ್ಸ್ ಜಮೀನು ಸ್ವಾಧೀನವಾಗಿದೆ. ಇದರಲ್ಲಿ 133 ಬಾಧಿತ ಕುಟುಂಬಗಳಾಗಿದ್ದು, 43 ಬಹುಪಾಲು ಭೂಮಿ ಕಳೆದುಕೊಳ್ಳುವ ಕುಟುಂಬಗಳಾಗಿವೆ. ಪಜಾ, ಪಪಂ 36 ಕುಟುಂಬಗಳಿವೆ. ಈ ಕುಟುಂಬಗಳಿಗೆ ಕೃಷಿಯೇ ಜೀವನಾಧಾರ ಭತ್ತದ ನಾಟಿ ಮೂಲಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಬಂದ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ 12 ವರ್ಷಗಳಿಂದ ಬೆಳೆಗಳು ಹಿನ್ನೀರಿನಲ್ಲಿ ಮುಳುಗಡೆಯಾಗಿ ನಾಶವಾಗುತ್ತಿದೆ. ಈ ವರೆಗೂ ಇಲಾಖೆಯಿಂದ ನಯಾ ಪೈಸೆ ಪರಿಹಾರ ನೀಡಿಲ್ಲ, ಜತೆಗೆ ನಮ್ಮ ಭೂಮಿಗೂ ಪರಿಹಾರ ಕೊಟ್ಟಿಲ್ಲ ಪ್ರತಿ ಬಾರಿ ನಷ್ಟ ಅನುಭವಿಸಿ, ನಮ್ಮ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ರೈತರು ತಮ್ಮ ನೋವು ತೊಡಿಕೊಳ್ಳುತ್ತಿದ್ದಾರೆ.ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಹೋದರೂ, ಸಂತ್ರಸ್ತರಿಗೆ ಮಾಹಿತಿ ಕೊಡದೇ ಇಲ್ಲ ಸಲ್ಲದ ನೆಪ ಹೇಳುತ್ತಾರೆ. ಈ ಕುರಿತು ಶಾಸಕರೊಂದಿಗೆ ಬೆಂಗಳೂರಿನ ಕಚೇರಿಗೆ ಹೋಗಿ ಚರ್ಚಿಸಿದಾಗ, ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಸಹಿ ಬಾಕಿ ಇದೆ. ಕೂಡಲೇ ಕ್ರಮ ಕೈಗೊಳ್ಳುತ್ತೇವೆಂದು ಹೇಳುತ್ತಾರೆ. ಆದರೆ ತಿಂಗಳು ಕಳೆದರೂ ಕಡತಗಳು ಟೇಬಲ್ ಮೇಲೆಯೇ ಧೂಳು ತಿನ್ನುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಪ್ರತಿ ವರ್ಷ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದಿದೆ. ತಿಂಗಳೊಳಗೆ ಸೂಕ್ತ ಪರಿಹಾರ ನೀಡದಿದ್ದರೆ ಸಿಂಗಟಾಲೂರು ಏತ ನೀರಾವರಿ ಕಚೇರಿಯ ಮುಂದೆಯೇ, ರೈತರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ರೈತ ಸಂತ್ರಸ್ತ ದೇವೇಂದ್ರಪ್ಪ ವಾಲ್ಮೀಕಿ, ಬೆಳವಿಗಿ ನಾಗರಾಜ, ಮೈಲಾರ ಹುಚ್ಚಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ 508 ಮೀಟರ್‌ಗೆ ಗೇಟ್ ಇಳಿಸಿ 2.171 ಟಿಎಂಸಿ ನೀರು ನಿಲ್ಲಿಸಿದ್ದಾರೆ. ಮಲೆನಾಡು ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಜತೆಗೆ ಭದ್ರಾ ಡ್ಯಾಂನಿಂದ ನೀರು ಬಿಡುಗಡೆಯಾದ ಪರಿಣಾಮ 136774 ಕ್ಯೂಸೆಕ್ ಒಳ ಹರಿವು ಇದೆ. ಬ್ಯಾರೇಜಿನ ಹಿನ್ನೀರಿಗೆ 83 ಎಕರೆ ಭತ್ತದ ನಾಟಿ ಮಾಡಿರುವ ಜಮೀನು ಮುಳುಗಡೆಯಾಗಿವೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ.ತಾಲೂಕಿನ ಬನ್ನಿಮಟ್ಟಿ ಗ್ರಾಮದಲ್ಲಿ ಯೋಜನೆಯ ಹಿನ್ನೀರಿನಿಂದ, 50 ಎಕರೆಯಲ್ಲಿ ಬೆಳೆದಿರುವ ಚೆಂಡು ಹೂವು ಮತ್ತು ಮೆಕ್ಕೆಜೋಳದ ಬೆಳೆ ಮುಳುಗಡೆಯಾಗಿದೆ. ನದಿ ತೀರದಲ್ಲಿ ರೈತರ ಪಂಪ್‌ಸೆಟ್‌ಗಳು ಹೊರಗಡೆ ತರಲು ಆಗದಷ್ಟು ನೀರು ರಭಸವಾಗಿ ಹರಿಯುತ್ತಿದೆ. ಇದರಿಂದ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಈ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕೆಂದು ಹಿರೇಬನ್ನಿಮಟ್ಟಿ ಗ್ರಾಮದ ಬೆಟ್ಟದ ಮಲ್ಲಪ್ಪ ಒತ್ತಾಯಿಸಿದ್ದಾರೆ.