ಗೋಕರ್ಣ ಬಸ್‌ ನಿಲ್ದಾಣಕ್ಕೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಭೇಟಿ

KannadaprabhaNewsNetwork |  
Published : Jul 31, 2025, 12:48 AM IST
ನೂತನ ಬಸ್ ನಿಲ್ದಾಣದ ನಿರ್ಮಾಣದ ನೀಲನಕ್ಷೆಯನ್ನ ವಿವರಿಸುತ್ತಿರುವ ಅಧಿಕಾರಿಗಳು  | Kannada Prabha

ಸಾರಾಂಶ

ಗೋಕರ್ಣದ ಬಸ್‌ ನಿಲ್ದಾಣಕ್ಕೆ ಬುಧವಾರ ಮುಂಜಾನೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರು ಭೇಟಿ ನೀಡಿ ಪರಿಶೀಲಿಸಿದರು.

ಗೋಕರ್ಣ: ಸೋರುತ್ತಿರುವ ಬಸ್ ನಿಲ್ದಾಣ, ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಬಸ್, ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ, ಆದರೆ ಪ್ರವಾಸಿ ತಾಣದ ಬಸ್ ನಿಲ್ದಾಣದ ಸಮಸ್ಯೆ ಕೇಳುವವರು ಯಾರು ಮೇಡಂ?

ಇಲ್ಲಿಯ ಬಸ್‌ ನಿಲ್ದಾಣಕ್ಕೆ ಬುಧವಾರ ಮುಂಜಾನೆ ಭೇಟಿ ನೀಡಿದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರು ಜನರ ಪ್ರಶ್ನೆಗಳ ಸುರಿಮಳೆಯಿಂದ ತಬ್ಬಿಬ್ಬಾದರು.

ಬಸ್‌ ನಿಲ್ದಾಣದಲ್ಲೇ ಸಾಲು ಸಾಲು ಸಮಸ್ಯೆಗಳಿರುವಾಗ ಅದನ್ನು ಸರಿಪಡಿಸುವುದನ್ನು ಬಿಟ್ಟು, ಅದರ ಪಕ್ಕದಲ್ಲಿ ಬೃಹತ್ ವಸತಿಗೃಹ ಕಟ್ಟಡ ನಿರ್ಮಿಸಲು ಖಾಸಗಿಯವರಿಗೆ ಅವಕಾಶ ನೀಡಿರುವುದನ್ನು ಜನರು ತೀವ್ರವಾಗಿ ಖಂಡಿಸಿದರು.

ಮೂರು ದಶಕಗಳ ಹಿಂದೆ ಇಲ್ಲಿನ ರೈತರು ಅತಿ ಕಡಿಮೆ ದರದಲ್ಲಿ ಬಸ್ ನಿಲ್ದಾಣ ಮತ್ತು ಡಿಪೋ ನಿರ್ಮಿಸಲು ಸಾರಿಗೆ ಸಂಸ್ಥೆಗೆ ಜಾಗ ನೀಡಿದ್ದರು. ಆದರೆ ಈಗ ಯಾವುದೇ ಸೌಲಭ್ಯ ನೀಡದೆ ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದೀರಿ, ಪ್ರಯಾಣಿಕರಿಗೆ ಸೌಲಭ್ಯ ನೀಡಲಾಗದಿದ್ದರೆ ಜಾಗವನ್ನೇ ವಾಪಸ್‌ ನೀಡಿ ಎಂದು ಗ್ರಾಪಂ ಸದಸ್ಯರಾದ ಪ್ರಭಾಕರ ಪ್ರಸಾದ, ರಮೇಶ ಪ್ರಸಾದ ಆಗ್ರಹಿಸಿದರು.

ಪ್ರವಾಸಿ ತಾಣದಲ್ಲಿ ಸಂಜೆಯಾದರೆ ಅಂಕೋಲಾ, ಕುಮಟಾಕ್ಕೆ ತೆರಳಲು ಬಸ್ ವ್ಯವಸ್ಥೆಯ ಇಲ್ಲದರಿರುವ ಬಗ್ಗೆ ಪ್ರಶ್ನಿಸಿದಾಗ ಗ್ರಾಪಂನಿಂದ ಮನವಿ ನೀಡುವಂತೆ ಸೂಚಿಸಿದರು.

ತೀರ ಹಳೆಯದಾದ ಬಸ್ ಬಿಡುತ್ತಿರುವುದು, ಶಿಥಿಲಗೊಂಡ ಕಟ್ಟಡದ ಬಗ್ಗೆ ಉತ್ತರಿಸಿದ ಪ್ರಿಯಾಂಗಾ, ಈಗಾಗಲೇ ಬಹುತೇಕ ಹಾಳಾಗಿರುವ ಬಸ್ ನಿಲ್ದಾಣ ದುರಸ್ತಿ ಕಷ್ಟ, ಆದ್ದರಿಂದ ಒಟ್ಟು ₹9 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅಮ್ಮನ್ನನವರ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಸದಸ್ಯರಾದ ಗಣಪತಿ ನಾಯ್ಕ, ಸಂದೇಶ ಗೌಡ, ಸತೀಶ ದೇಶಭಂಡಾರಿ, ಗೋವಿಂದ ಮುಕ್ರಿ, ಸ್ಥಳೀಯರಾದ ಬಾಲಚಂದ್ರ ಮಾರ್ಕಾಂಡೆ, ಪರಮೇಶ್ವರ ಮಾರ್ಕಾಂಡೆ, ಮೋಹನ ಪ್ರಸಾದ, ಸಾಮಾಜಿಕ ಕಾರ್ಯಕರ್ತ ಸಂತೋಷ ಅಡಿ, ನಾಗೇಶ ಸೂರಿ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ