ಹಳಿಯಾಳ: ಮಳೆಗಾಲದಲ್ಲಿಯೂ ಪಟ್ಟಣ ಕುಡಿಯುವ ನೀರಿನ ಸಮಸ್ಯೆ ಎದುರಿಸಲಾರಂಭಿಸಿದೆ. ಅಸಮರ್ಪಕವಾದ ನೀರಿನ ಪೂರೈಕೆಯ ಪರಿಣಾಮ ಪಟ್ಟಣದ ಜನತೆ ನಿದ್ದೆಗೆಡಿಸಿಕೊಂಡಿದ್ದು, ಮಧ್ಯರಾತ್ರಿ ನೀರು ತುಂಬಲು ಜಾಗರಣೆ ಮಾಡುತ್ತಿದ್ದಾರೆ.
ಮಹತ್ವಾಕಾಂಕ್ಷೆಯೊಂದಿಗೆ ಹಳಿಯಾಳದಲ್ಲಿ ಆರಂಭಗೊಂಡ ನಿರಂತರ ಕುಡಿಯುವ ನೀರಿನ ಯೋಜನೆ ವಿಫಲವಾದ ಪರಿಣಾಮ ಪಟ್ಟಣದ ಜನತೆ ಈಗ ಸಮಸ್ಯೆ ಅನುಭವಿಸಲಾರಂಭಿಸಿದ್ದಾರೆ.ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಪೈಪ್ ಒಡೆದಿದೆ, ವಿದ್ಯುತ್ ಸಮಸ್ಯೆಯಾಗಿದೆ ಎಂದು ಹೇಳಿ ಪುರಸಭೆಯವರು ನುಣುಚಿಕೊಳ್ಳುತ್ತಿದೆ. ಹದಿನೈದು ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ಪೈಪ್ ಒಡೆಯುವುದು, ವಿದ್ಯುತ್ ಸಮಸ್ಯೆ ಎದುರಾಗುವುದು ಇಲ್ಲಿ ಮಾಮೂಲು.
ಮೂರೇ ವರ್ಷದಲ್ಲಿ ವಿಫಲ: ಪಟ್ಟಣ ಎದುರಿಸುತ್ತಿರುವ ಜೀವಜಲದ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ₹23 ಕೋಟಿ ವೆಚ್ಚದ ಯೋಜನೆಯನ್ನು 2013ರಲ್ಲಿ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಅನುಷ್ಠಾನಗೊಳಿಸಿದರು. ದಾಂಡೇಲಿ ಬಳಿಯ ಕಾಳಿನದಿಯಿಂದ ಹಳಿಯಾಳ ಪಟ್ಟಣಕ್ಕೆ ದಿನದ 24 ತಾಸು ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 2017ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದರು. ಆದರೆ ಈ ಯೋಜನೆಯೂ ಆರಂಭಗೊಂಡ ಮೂರೇ ವರ್ಷದಲ್ಲಿ ವಿಫಲವಾಯಿತು. ಯೋಜನೆಯ ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆ ಪಡೆದಿದ್ದ ಜೈನ ಇರಿಗೇಷನ್ ಕಂಪನಿಯವರ ನಿರ್ವಹಣಾ ಗುತ್ತಿಗೆ ಅವಧಿ 2022ರ ಜೂನ್ ತಿಂಗಳಲ್ಲಿ ಮುಕ್ತಾಯಗೊಂಡಿತು. ತದನಂತರ ಪುರಸಭೆ ನೀರು ಪೂರೈಸುವ ನಿರ್ವಹಣೆ ವಹಿಸಿದ ಆನಂತರ ಯೋಜನೆಯು ಹಳ್ಳ ಹಿಡಿಯಿತು. ವಿದ್ಯುತ್ ಸಮಸ್ಯೆ, ಪೈಪ್ ಒಡೆಯುವುದು, ದುರಸ್ತಿ ಹೀಗೆ ಒಂದಿಲ್ಲೊಂದು ಸಬೂಬು ನೀಡಿ 2023ರ ವಿಧಾನಸಭಾ ಚುನಾವಣೆ ವರೆಗೆ ದಿನದೂಡಿದ ಪುರಸಭೆಯವರು ಚುನಾವಣೆಯಾದ ಆನಂತರ ದಿನಬಿಟ್ಟು ದಿನ ನೀರು ಪೂರೈಕೆ ಆರಂಭಿಸಿದರು.ಈಗ ನೀರಿಗಾಗಿ ಜಾಗರಣೆ: ಯೋಜನೆ ಆರಂಭಗೊಂಡಾಗ ಮೂವತ್ತು ಅಡಿ ನೀರು ಏರಬಲ್ಲದು ಎಂದು ಪುರಸಭೆ ನಂಬಿಸಿತು. ಈಗ ಮೂರು ಅಡಿ ನೀರು ಏರುತ್ತಿಲ್ಲ. ಎತ್ತರದಲ್ಲಿರುವ ಬಡಾವಣೆಗಳಾಗಲಿ, ಓಣಿಗಳಿಗೆ ನೀರು ಬರುತ್ತಿಲ್ಲ. ಇಳಿಜಾರಿನಲ್ಲಿರುವ ಮನೆಗಳು, ಬಡಾವಣೆಗಳು, ಓಣಿಗಳು ನಲ್ಲಿಗಳನ್ನು ಬಂದ್ ಮಾಡಿದ ಮೇಲೆಯೇ ಮೇಲ್ಭಾಗದಲ್ಲಿರುವರ ನಲ್ಲಿಗಳಿಗೆ ನೀರು ಬರು(ಏರು)ತ್ತದೆ. ಅದಕ್ಕಾಗಿ ಪಟ್ಟಣದ ಜನತೆ ಈಗ ನೀರಿಗಾಗಿ ನಿದ್ದೆಗೆಡಿಸಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಪುರಸಭೆಯ ಗಮನಕ್ಕೂ ತಂದರೂ ಯಾವ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹೊಸದಾಗಿ ಮಂಜೂರಾಗಿರುವ ಅಮೃತ ಯೋಜನೆ ಆರಂಭಗೊಳ್ಳುವರೆಗೂ ಹಳಿಯಾಳ ಪಟ್ಟಣಕ್ಕೆ ನೀರಿನ ಸಮಸ್ಯೆ ಬಾಧಿಸಲಿದೆ. ಯಾರಿಗೆ ಯಾವ ವಾರ್ಡ್‌ಗೆ ನೀರು ಬೇಕೆಂದು ತಿಳಿಸಿದರೆ ಸಾಕು ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುವುದೆಂದು ಹಳಿಯಾಳ ಪುರಸಭೆ ಹೇಳುತ್ತಿದೆ. ಕಾಮಗಾರಿ ನಡೆದಿದೆ: ಸದ್ಯ ಎದುರಾಗಿರುವ ನೀರಿನ ಸಮಸ್ಯೆ ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಜನರಿಗೆ ಬೇಕಾದರೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ. ಪಟ್ಟಣಕ್ಕೆ ಎದುರಾಗಿರುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕ ದೇಶಪಾಂಡೆ ಅವರು ₹60 ಕೋಟಿ ವೆಚ್ಚದ ಅಮೃತ ಯೋಜನೆ ಮಂಜೂರು ಮಾಡಿಸಿ ತಂದಿದ್ದು, ಅದರ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಚವ್ಹಾಣ ಹೇಳಿದರು.