ಸಿದ್ದಾಪುರ: ಗ್ರಾಮ ಪಂಚಾಯಿತಿಗೆ ೧೫ನೇ ಹಣಕಾಸು ಹೊರತುಪಡಿಸಿ ಇನ್ನುಳಿದ ಅನುದಾನಗಳು ದೊರೆಯದಿರುವ ಕಾರಣ ಅಭಿವೃದ್ಧಿ ಕೆಲಸಗಳು ಹಾಗೂ ವಿಪತ್ತು ನಿರ್ವಹಣೆ ಮುಂತಾದವು ಸಾಧ್ಯವಾಗುತ್ತಿಲ್ಲ ಎಂದು ಶಿರಳಗಿ ಗ್ರಾಪಂ ಅಧ್ಯಕ್ಷ ಮಾರುತಿ ನಾಯ್ಕ ಹೇಳಿದರು.
ಕೆಲವು ದಿನಗಳ ಹಿಂದೆ ಬಿಕ್ಕಳಸೆಯಲ್ಲಿ ಮನೆ ಸಂಪೂರ್ಣ ಸುಟ್ಟುಹೋಗಿತ್ತು. ಆ ಕುಟುಂಬಕ್ಕೆ ಗ್ರಾಪಂನಿಂದ ಸಾಧ್ಯವಾದ ಸಹಾಯ ಒದಗಿಸಿದ್ದೇವೆ. ಮನೆಯನ್ನೂ ಮಂಜೂರು ಮಾಡಲಾಗಿದೆ. ಆದರೆ ವಿಪತ್ತು ನಿರ್ವಹಣೆಯಲ್ಲಿ ದೊರೆಯುವ ಯಾವುದೇ ಸಹಾಯ ಆ ಕುಟುಂಬಕ್ಕೆ ದೊರಕಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಗ್ರಾಪಂನಿಂದ ಕೊಡಿ ಎನ್ನುತ್ತಾರೆ ಎಂದರು.
ಪಿಡಿಒಗಳಿಗೆ ಎರಡು ಗ್ರಾಪಂಗಳ ಜವಾಬ್ದಾರಿ ಇರುವ ಕಾರಣ ಕೆಲಸಗಳು ವಿಳಂಬವಾಗುತ್ತದೆ. ಕಾಯಂ ಆಗಿ ಪಿಡಿಒಗಳಿದ್ದರೆ ಗ್ರಾಪಂ ಕೆಲಸಗಳಿಗೆ ವೇಗ ಸಿಗುತ್ತದೆ. ರೇಶನ್ ಕಾರ್ಡ್, ಮನೆ ನಂಬರ್ ಒದಗಿಸುವ ಮತ್ತು ಇ- ಸ್ವತ್ತಿನ ಸಮಸ್ಯೆ ನಮಗೆ ನಿರಂತರವಾಗಿದೆ. ಹೆಚ್ಚುವರಿ ಗ್ರಂಥಾಲಯ ಮಂಜೂರಾಗಿದ್ದು, ಅಲ್ಲಿನ ಸಿಬ್ಬಂದಿಗೆ ಸಂಬಳ ನೀಡಲು ನಮ್ಮಲ್ಲಿ ಅನುದಾನವಿಲ್ಲ. ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮೂರು ಬಾರಿ ಪತ್ರ ಬರೆದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಶಾಸಕರು, ಸಂಸದರು ಈ ಬಗ್ಗೆ ಗಮನಹರಿಸಬೇಕು ಎಂದು ಮಾರುತಿ ನಾಯ್ಕ ಆಗ್ರಹಿಸಿದರು.ಉಪಾಧ್ಯಕ್ಷೆ ಮಹಾಲಕ್ಷ್ಮೀ ನಾಯ್ಕ ಸದಸ್ಯರಾದ ಧನಂಜಯ ನಾಯ್ಕ, ಶ್ರೀಕಾಂತ ಭಟ್ಟ, ರಾಮಚಂದ್ರ ನಾಯ್ಕ, ಶಶಿಕಲಾ ಹರಿಜನ, ಲತಾ ನಾಯ್ಕ, ನೇತ್ರಾವತಿ ಮಡಿವಾಳ ಇದ್ದರು.