ಕನಕಗಿರಿ:
ಗ್ರಾಮದ ಉತ್ತರಕ್ಕೆ ಒಂದು ಶಾಸನ ಮತ್ತು ಆಗ್ನೇಯಕ್ಕೆ ಎರಡು ಕಿಲೋ ಮೀಟರ್ ಅಂತರದಲ್ಲಿ ಹುಟ್ಟು ಬಂಡೆಯ ಮೇಲೆ ಬರೆದ ಮತ್ತೊಂದು ಶಾಸನ ಪತ್ತೆಯಾಗಿದ್ದು, ಮೊದಲ ಶಾಸನ 24 ಸಾಲುಗಳಲ್ಲಿ, ಎರಡನೇ ಶಾಸನ ಆರು ಸಾಲುಗಳಲ್ಲಿ ಇದ್ದು, 17ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿವೆ.ಮೊದಲ ಶಾಸನ ಚಾರಿತ್ರಿಕವಾಗಿ ಮಹತ್ವ ಪಡೆದಿದ್ದು, ಕನಕಗಿರಿಯ ಅರಸರ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತಿದೆ. ಇದು 5ನೇ ದೊರೆ ಇಮ್ಮಡಿ ಉಡಚನಾಯಕನ ಪಟ್ಟದ ರಾಣಿ ಚಿಕ್ಕ ಲಕ್ಷ್ಮಮ್ಮನ ಮಗ ಲಕ್ಷ್ಮಪ್ಪ ನಾಯಕನು ಕನಕಗಿರಿ ವಿದ್ಯಾನಗರ ಮಾರ್ಗದಲ್ಲಿ ಬಂಕಾಪುರದ ಬಳಿ ದೇವಸ್ಥಾನ, ಬಾವಿ, ವನಗಳನ್ನು ನಿರ್ಮಿಸಿ ದೇವರ ಪೂಜೆಗಾಗಿ ಗದ್ದೆಯನ್ನು ದಾನವಾಗಿ ಸಮರ್ಪಿಸಿದ ಬಗ್ಗೆ ತಿಳಿಸುತ್ತದೆ.
ಪ್ರಾಸಂಗಿಕವಾಗಿ ಶಾಸನದಲ್ಲಿ ಇಮ್ಮಡಿ ಉಡಚನಾಯಕನ ತಂದೆ ಕನಕಯ್ಯ ನಾಯಕ, ತಾತ ಕೆಲವಡಿ ಉಡಚ ನಾಯಕ ಎಂದು ತಿಳಿಸಿರುವುದರಿಂದ ಈ ಇಬ್ಬರು ಅರಸರ ಬಗ್ಗೆ ಮೊಟ್ಟ ಮೊದಲ ಶಾಸನ ಉಲ್ಲೇಖ ದೊರೆತಂತಾಗಿದೆ. ಇಮ್ಮಡಿ ಉಡಚನಾಯಕನಿಗೆ ಚಿನ್ನಮ್ಮ, ಅಚ್ಚಮ್ಮ, ಲಕ್ಷ್ಮಮ್ಮ ಎಂಬ ರಾಣಿಯರು ಇರುವುದು ಇತರೆ ಶಾಸನಗಳಿಂದ ತಿಳಿದು ಬಂದಿತ್ತು. ಆದರೆ, ಈ ಶಾಸನ ಲಕ್ಷ್ಮಮ್ಮನು ಪಟ್ಟದ ರಾಣಿ ಎಂದೂ ಆಕೆಗೆ ಲಕ್ಷ್ಮಪ್ಪ ನಾಯಕ ಎಂಬ ಮಗ ಇದ್ದ ಎಂಬುದು ಹೊಸ ಸಂಗತಿಯನ್ನು ತಿಳಿಸುತ್ತಿದೆ. ಬಂಕಾಪುರದಲ್ಲಿ ಲಕ್ಷ್ಮಪ್ಪನಾಯಕನ ಪರವಾಗಿ ರಾಂ ಭೋಯಿ ತಿಮ್ಮಯ್ಯ ಎಂಬವನು ದೇವಾಲಯ ಕಟ್ಟಿಸುತ್ತಾನೆ. ಇಂದಿಗೂ ಈ ದೇವಾಲಯಕ್ಕೆ ರಾಮ ತಿಮ್ಮಪ್ಪನ ಗುಡಿ( ವಿಷ್ಣು) ಎಂದು ಕರೆಯಲ್ಪಟ್ಟಿದೆ.ಶಾಸನದಲ್ಲಿ ಉಕ್ತವಾದ ಕಾಲಮಾನ ಶಾಲಿವಾಹನ ಶಕೆ 1603ನೇ ದುರ್ಮುಖಿ ನಾಮ ಸಂವತ್ಸರದ ಪಾಲ್ಗುಣ ಶುದ್ಧ 12 ಎಂದಿದ್ದು, ಅದು ಸಾಮಾನ್ಯ ಶಕೆ ಮಾರ್ಚ್ 4, 1682ಕ್ಕೆ ಸರಿಯಾಗುತ್ತದೆ. ಶಾಸನದ ಗುಂಡಿನ ಹಿಂಬದಿಯಲ್ಲಿ ಎಲ್ಲ ಶಾಸನಗಳಿಗಿರುವಂತೆ ಶಾಪಾಶಯದ ಶ್ಲೋಕವಿದ್ದು ದಾನ ಅಪಹರಿಸಿದ ಹಿಂದೂಗಳು ವಾರಣಾಸಿಯಲ್ಲಿ ಗೋವು ಕೊಂದ ಪಾಪಕ್ಕೆ ಹೋಗುವರು ಎಂದಿದೆ. ಜತೆಗೆ ಮುಸಲ್ಮಾನರು ತಮ್ಮ ಮಸೀದಿಯಲ್ಲಿ ಹಂದಿ ಕೊಂದ ಪಾಪಕ್ಕೆ ಹೋಗುವರು ಎಂದಿರುವುದು ಅಪರೂಪವಾಗಿದೆ.
ಶಾಸನ ಶೋಧನೆಯಲ್ಲಿ ಕನಕಗಿರಿಯ ದುರ್ಗಾದಾಸ ಯಾದವ್, ಬಂಕಾಪುರದ ಸೋಮನಾಥ, ಗಂಗಾವತಿಯ ಬಸವರಾಜ ಅಯೋಧ್ಯ,
ಡಾ. ಸುರೇಶಗೌಡ ಹಾಗೂ ಇತಿಹಾಸ ಪ್ರೇಮಿ ಹರನಾಯಕ ನೆರವಾಗಿದ್ದಾರೆಂದು ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.