ದಿನಕ್ಕೊಂದು ಇಂಗ್ಲಿಷ್ ಪದ ಬಿಡಿ: ರಾಘವೇಶ್ವರ ಶ್ರೀ ಸಲಹೆ

KannadaprabhaNewsNetwork |  
Published : Jul 31, 2025, 12:48 AM IST
  ¸ ಸರ್ವಸೇವೆ ನೆರವೇರಿಸಿದ ಶಿಷ್ಯಂದಿರಿಗೆ ಆರ್ಶೀವದಿಸುತ್ತಿರುವ ಶ್ರೀಗಳು  | Kannada Prabha

ಸಾರಾಂಶ

ಗೋಕರ್ಣ ಸಮೀಪದ ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ೨೧ನೇ ದಿನವಾದ ಬುಧವಾರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮಕರ್ತ ಬಾಲಚಂದ್ರ ಭಟ್ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿದರು.

ಗೋಕರ್ಣ: ದಿನಕ್ಕೊಂದು ಇಂಗ್ಲಿಷ್ ಪದ ಬಿಡುವ ಮೂಲಕ ಸ್ವಭಾಷೆಯ ಶುದ್ಧೀಕರಣದ ಪ್ರಯತ್ನ ಮಾಡೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಸಲಹೆ ಮಾಡಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ೨೧ನೇ ದಿನವಾದ ಬುಧವಾರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮಕರ್ತ ಬಾಲಚಂದ್ರ ಭಟ್ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಇಂಗ್ಲಿಷ್ ವಾಸ್ತವವಾಗಿ ಶುದ್ಧಭಾಷೆಯಲ್ಲ; ಒಂದು ರೀತಿಯಲ್ಲಿ ಕಲುಷಿತ ಭಾಷೆ ಎಂದರೆ ತಪ್ಪಲ್ಲ. ಏಕೆಂದರೆ ಇಂಗ್ಲಿಷ್‌ನಲ್ಲಿ ಹಲವು ವರ್ಣಗಳೇ ಇಲ್ಲ. ಕನ್ನಡ ವರ್ಣಮಾಲೆಯಲ್ಲಿ ೫೨ ಅಕ್ಷರಗಳಿದ್ದರೆ ಇಂಗ್ಲಿಷ್‌ನಲ್ಲಿ ಕೇವಲ ೨೬ ಅಕ್ಷರಗಳಿವೆ. ನಮ್ಮ ಸಂಸ್ಕೃತಿ- ಪರಂಪರೆಗೆ ಒಗ್ಗುವ ಭಾಷೆ ಕನ್ನಡ. ಆದರೆ ಇಂದು ನಮ್ಮ ಭಾಷೆಯ ಹಲವು ಪದಗಳನ್ನು ನಾವು ಮರೆತು ಇಂಗ್ಲಿಷ್ ಪದಗಳ ಕಲಬೆರಕೆ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಇತರ ಪದಗಳನ್ನು ಸೇರಿಸಿ ಕನ್ನಡವನ್ನು ಕಲುಷಿತಗೊಳಿಸುವುದು ಬೇಡ; ಕನ್ನಡದ ಶುದ್ಧತೆ ಉಳಿಯಬೇಕು. ಇಲ್ಲದಿದ್ದರೆ ಮುಂದಿನ ಜನಾಂಗಕ್ಕೆ ನಾವು ಕಲುಷಿತ ಭಾಷೆ ಬಿಟ್ಟುಹೋಗಬೇಕಾಗುತ್ತದೆ. ಆದ್ದರಿಂದ ನಮ್ಮ ಭಾಷೆಯಲ್ಲಿ ಸೇರಿಕೊಂಡಿರುವ ಕನಿಷ್ಠ ಒಂದು ಇಂಗ್ಲಿಷ್ ಪದವನ್ನಾದರೂ ಪ್ರತಿ ದಿನ ಬಿಡುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

ಇಂದು ಸೋಪು ಎಂಬ ಸಾಮಾನ್ಯ ಬಳಕೆಯಲ್ಲಿರುವ ಆಂಗ್ಲಪದವನ್ನು ಬಿಡೋಣ. ಕನ್ನಡದಲ್ಲಿ ಅಪರೂಪಕ್ಕೆ ಸಾಬೂನು ಪದ ಬಳಸುತ್ತೇವೆ. ಅದು ಕೂಡಾ ಮೂಲತಃ ಕನ್ನಡ ಶಬ್ದವಲ್ಲ; ಅದು ಪರ್ಷಿಯನ್ ಭಾಷೆಯಿಂದ ಬಂದದ್ದು. ಮೂಲವಾಗಿ ಲ್ಯಾಟಿನ್ ಭಾಷೆಯ ಸ್ಯಾಪೊ, ಕನ್ನಡದಲ್ಲಿ ಸೋಪು ಎಂದು ಬಳಕೆಯಾಗುತ್ತಿದೆ. ಇದಕ್ಕೆ ತಿಳಿಗನ್ನಡದಲ್ಲಿ ಸಬಕಾರ ಎಂಬ ಪರ್ಯಾಯ ಪದ ಇದೆ ಎಂದು ವಿವರಿಸಿದರು.

ತಕ್ಷಣಕ್ಕೆ ಸೋಪು ಬದಲು ಸಾಬೂನು ಪದ ಬಳಸಿದರೂ ತಪ್ಪಲ್ಲ; ಆದರೆ ಸಬಕಾರ ಅಥವಾ ನೊರೆಬಿಲ್ಲೆ ಎನ್ನುವುದು ಕನ್ನಡದ ಒಳ್ಳೆಯ ಶಬ್ದ. ಸಂಸ್ಕೃತದಲ್ಲಿ ಮಾರ್ಜಕ ಎಂಬ ಬಳಕೆ ಇದೆ. ನಮ್ಮ ಹಿರಿಯರು ಬಳಸುತ್ತಿದ್ದ ಇಂಥ ಪದವನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು.

ಸೋಪು ಶಬ್ದ ಹೇಗೆ ಪಾಶ್ಚಾತ್ಯದ್ದೋ ಸೋಪಿನ ಸಂಸ್ಕೃತಿಯೂ ಪಾಶ್ಚಾತ್ಯ. ಭಾರತದಲ್ಲಿ ಅನಾದಿಕಾಲದಿಂದಲೂ ಸ್ನಾನಚೂರ್ಣದ ಬಳಕೆ ಕಾಣುತ್ತೇವೆ. ಅದು ವೈಜ್ಞಾನಿಕ ಕೂಡಾ. ಸೋಪಿನ ಕಣಗಳು ಚರ್ಮದ ರಂಧ್ರವನ್ನು ಮುಚ್ಚಿ ತ್ವಚೆಯ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ಆದರೆ ಭಾರತದಲ್ಲಿ ಬಳಕೆಯಲ್ಲಿದ್ದ ಸೀಗೆಕಾಯಿಯಂಥ ಒರಟು ಸ್ನಾನಚೂರ್ಣ ಹೆಚ್ಚು ಆರೋಗ್ಯಕಾರಿ ಎಂದು ವಿಶ್ಲೇಷಿಸಿದರು.

ಹಿಂದೆ ದೇಹಶುದ್ಧಿಗೆ ಮಣ್ಣನ್ನೂ ಬಳಸಲಾಗುತ್ತಿತ್ತು. ಆದರೆ ಮಣ್ಣನ್ನು ಇಂದು ಕೊಳಕು ಎಂದು ಪರಿಗಣಿಸಲಾಗುತ್ತಿದೆ. ಮಣ್ಣಿನಿಂದಲೇ ಹುಟ್ಟಿ ಮಣ್ಣಿನಲ್ಲೇ ಬೆಳೆದು ಮಣ್ಣನ್ನೇ ಸೇರುವ ನಾವು ಮಣ್ಣನ್ನು ಕೊಳಕು ಎಂದು ಪರಿಗಣಿಸುವ ಹಂತಕ್ಕೆ ಬಂದಿದ್ದೇವೆ. ಪಂಚಭೂತಗಳಿಂದ ಮಾಡಲ್ಪಟ್ಟ ದೇಹದ ಶುದ್ಧಿಗೂ ಮಣ್ಣು, ನೀರು, ಅಗ್ನಿ, ಗಾಳಿ ಒಳ್ಳೆಯದು. ಆದ್ದರಿಂದ ಕ್ರಮೇಣ ಸೋಪನ್ನೇ ಬಿಡೋಣ; ಮೊದಲ ಹಂತದಲ್ಲಿ ಆ ಪದವನ್ನಾದರೂ ಬಿಡೋಣ ಎಂದು ಸಲಹೆ ಮಾಡಿದರು.

ವಿವಿವಿ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯ ತಂಡದ ಜಿ.ವಿ. ಹೆಗಡೆ, ಶ್ರೀ ಪರಿವಾರದ ರಾಘವೇಂದ್ರ ಮಧ್ಯಸ್ಥ, ಸುಚೇತನ ಶಾಸ್ತ್ರಿಗಳು ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ