ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ (ಜಿಎಸ್‌ಬಿ) ಇದರ 87ನೇ ಸಂಸ್ಥಾಪನಾ ದಿನಾಚರಣೆ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಮಂಗಳೂರು ಗೋಕರ್ಣ ಮಠದ ಉಪಾಧ್ಯಕ್ಷ ಎಸ್. ಪಾಂಡುರಂಗ ಆಚಾರ್ಯ ಮಾತನಾಡಿ, ಇಂದಿನ ಪೀಳಿಗೆ ಶ್ರೇಷ್ಠ ಸಾಧನೆ ಮಾಡುವ ಧ್ಯೇಯಗಳನ್ನು ಹೊಂದಬೇಕು. ದೇವರ ನಾಮ ಜಪದೊಂದಿಗೆ ಮಾಡಿದ ಯಾವುದೇ ಕೆಲಸ ಸಫಲವಾಗುವುದು ಖಂಡಿತ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಸಮ್ಮಾನಿಸಿ ಮಾತನಾಡಿದ ಕೆನರಾ ವರ್ಕ್‌ಶಾಪ್ ಲಿಮಿಟೆಡ್ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ಪ್ರೇಮನಾಥ್ ಎಸ್.ಕುಡ್ವ, ಸಿಂಡಿಕೇಟ್ ಬ್ಯಾಂಕ್ ನ ಸ್ಥಾಪಕರಲ್ಲಿ ಓರ್ವರಾದ ವಿ.ಎಸ್. ಕುಡ್ವ ಅವರ ಮೊಮ್ಮಗ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಡಾ. ಟಿ.ಎಂ.ಎ. ಪೈ, ಉಪೇಂದ್ರ ಪೈ ಅವರಂತಹ ದಾರ್ಶನಿಕರು ಕನಸು ಕಂಡ ಕಾರಣ ಇಂದಿನ ಪೀಳಿಗೆ ಅತ್ಯಂತ ಹೆಚ್ಚಿನ ಪ್ರಯೋಜನ ಪಡೆದಿದೆ ಎಂದು ಹೇಳಿದರು. ಜಿಎಸ್‌ಬಿ ಸೇವಾ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ ಪ್ರಾಸ್ತಾವಿಕದಲ್ಲಿ, ನಮ್ಮ ಪೂರ್ವಜರು ನಿಗರ್ತಿಕ ಸ್ಥಿತಿಯಲ್ಲಿ 1560ರ ಬಳಿಕ ಕರಾವಳಿ ಕರ್ನಾಟಕ ಪ್ರದೇಶಕ್ಕೆ ಬಂದು ತಲುಪಿದ್ದರು. ಆದರೆ ಸ್ವಾಭಿಮಾನದ ಜೀವನ ನಡೆಸಿದ ಅವರು ಮೊದಲು ಬೇಸಾಯಗಾರರಾಗಿದ್ದರು. ಆ ಬಳಿಕ ಅನೇಕ ವ್ಯಾಪಾರಗಳನ್ನು ಮಾಡಿದ ಅವರು ಸ್ವಧರ್ಮವನ್ನು ಕಾಪಾಡುವ ಕೆಲಸ ಮಾಡಿದರು. ಇಷ್ಟೆಲ್ಲ ಸಾಧನೆ ಮಾಡಿದ ಸಮಾಜದಲ್ಲಿ ಮಾತೃಭಾಷೆ ಕೊಂಕಣಿ ಬಗ್ಗೆ ನಿರ್ಲಕ್ಷ ಕಾಣುತ್ತಿದೆ. ಇದು ಹೋಗಲಾಡಿಸಬೇಕು. ಇದನ್ನು ಸಾಧಿಸಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡೊಣ ಎಂದು ತಿಳಿಸಿದರು. ಉದ್ಯಮಿ ಕುಂಬ್ಳೆ ನರಸಿಂಹ ಪ್ರಭು, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಲಿ ಮಠ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಾಧನೆಯನ್ನು ವಿವರಿಸಿದರು. ಈ ವರ್ಷದ ಸಂಸ್ಥಾಪನ ದಿನವನ್ನು ಜಿಎಸ್‌ಬಿ ಸಮಾಜದ ಎರಡು ಶ್ರೇಷ್ಠ ಸಂಸ್ಥೆಗಳಾದ 550 ವರ್ಷಗಳ ಸಂಭ್ರಮಾಚರಣೆ ಮಾಡುತ್ತಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠ ಹಾಗೂ 100 ವರ್ಷಗಳನ್ನು ಪೂರೈಸಿರುವ ಸಿಂಡಿಕೇಟ್ ಬ್ಯಾಂಕ್ ಇವುಗಳಿಗೆ ಸಮರ್ಪಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊಂಕಣಿ ಕಥಾ ಅನುವಾದ, ಕೊಂಕಣಿ ಪದಗಳ ಬರವಣಿಗೆ, ಭಾಷಣ ಸ್ಪರ್ಧೆ,ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಮೊದಲಾದ ವಿವಿಧ ಸ್ಪರ್ಧೆಗಳು ನಡೆಯಿತು. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ವರೆಗಿನ 150 ಕ್ಕೂ ಅಧಿಕ ವಿದ್ಯಾರ್ಥಿಗಳು, ಕ್ರೀಡೆ, ಲಲಿತಕಲೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. 6ನೇ ತರಗತಿಯಿಂದ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಕಲಿಯುತ್ತಿರುವ ಮಂಗಳೂರಿನ ಸುಮಾರು 25 ವಿದ್ಯಾರ್ಥಿಗಳಿಗೆ ತಲಾ 10,000 ರು.ನಂತೆ ನಗದು ನೀಡಿ ಕಲಿಕೆಗೆ ಪ್ರೋತ್ಸಾಹ ನೀಡಲಾಯಿತು. ಪ್ರಮುಖರಾದ ವಿಜಯಚಂದ್ರ ಕಾಮತ್, ಮಾಧವರಾಯ ಪ್ರಭು, ಡಾ. ಎ. ರಮೇಶ್ ಪೈ, ಬಿ.ಅರ್. ಶೆಣೈ, ಎಂ. ರಾಧಾಕೃಷ್ಣ ಕಾಮತ್, ಶಾಂಭವಿ ಪ್ರಭು, ಮೋಹನ್ ದಾಸ್ ಪೈ, ವೆಂಕಟೇಶ್ ಎನ್. ಬಾಳಿಗ ಮತ್ತಿತರರು ಇದ್ದರು. ಎಂ.ಎಸ್. ಪ್ರಭು ವಂದಿಸಿ, ಸುಚಿತ್ರಾ ಎಸ್. ಶೆಣೈ ನಿರೂಪಿಸಿದರು.