ರಾಮನಗರ: ಕೆಲವೆಡೆ ಮತಯಂತ್ರಗಳ ಅದಲು ಬದಲು, ಮತದಾರರಿಗೆ ಹಣ ಹಂಚಿಕೆ, ಕಾರ್ಯಕರ್ತರ ಮಾತಿನ ಚಕಮಕಿಯಂತಹ ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆದಿದ್ದು, ಪ್ರಾಥಮಿಕ ವರದಿ ಪ್ರಕಾರ ಅಂದಾಜು ಶೇ 88.81 ಮತದಾನ ಆಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳ ನಾಯಕರು ಅಭ್ಯರ್ಥಿಗಳೊಂದಿಗೆ ಭರ್ಜರಿ ಪ್ರಚಾರ ನಡೆಸಿದ್ದರು. ಅಲ್ಲದೆ, ಚುನಾವಣಾ ಆಯೋಗವೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಕುರಿತು ಅರಿವು ಮೂಡಿಸಿತು. ಇದರ ಫಲವಾಗಿ ಮತದಾರರನ್ನು ಮತಗಟ್ಟೆಗೆ ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಮತದಾನದ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಬೆಳಿಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಂಡಾಗ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆಲ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು. ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಒತ್ತಡಕ್ಕೆ ಮಣಿದು ಮತದಾರರು ಮತ ಚಲಾಯಿಸಿದ ನಿದರ್ಶನಗಳಿವೆ.ಬೆಳಗ್ಗೆ 9ಗಂಟೆ ವೇಳೆಗೆ ಕ್ಷೇತ್ರದಲ್ಲಿ ಶೇ 10.34 ರಷ್ಟು ಮತದಾನ ನಡೆದಿತ್ತು. ಬೆಳಗ್ಗೆ 11 ಗಂಟೆ ವೇಳೆ 31,160 ಪುರುಷರು , 31,781 ಮಹಿಳೆಯರು ಸೇರಿ ಒಟ್ಟು 62,941 ಮಂದಿ ಹಕ್ಕು ಚಲಾಯಿಸಿದ್ದರು, ಅಂದರೆ ಶೇ.27.02ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 67.63ರಷ್ಟು ಮತದಾನ ನಡೆದಿತ್ತು. ಬೆಳಗ್ಗೆಯಿಂದಲೇ ಬಿರುಸಿನಿಂದ ಸಾಗಿದ ಮತದಾನ ಮಧ್ಯಾಹ್ನದ ನಂತರ ಮತ್ತಷ್ಟು ಚುರುಕು ಪಡೆದುಕೊಂಡಿತು. ಸಂಜೆ 5 ಗಂಟೆ ವೇಳೆಗೆ ಶೇ 84.29ರಷ್ಟು ಮತದಾನವಾಗಿತ್ತು.
ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳ ಹಣೆ ಬರಹ ನ.23ರವರೆಗೆ ಮತಯಂತ್ರಗಳಲ್ಲಿ ಭದ್ರವಾಗಿರುತ್ತದೆ.
1.ಚಕ್ಕರೆಯ ಮತಗಟ್ಟೆ ಸಂಖ್ಯೆ 167ನಲ್ಲಿ ಮತದಾನ ಮಾಡಲು 85 ವರ್ಷದ ವೃದ್ದೆ ಗೌರಮ್ಮ ವೀಲ್ ಚೇರ್ ನಲ್ಲಿ ಆಗಮಿಸಿ ಮತದಾನ ಮಾಡಿದರು.
3.ಸೈಯದ್ ವಾಡಿ ಮತಗಟ್ಟೆಯಲ್ಲಿ ಮತದಾರರು ಸಾಲುಗಟ್ಟಿ ನಿಂತಿರುವುದು
5. ಕೊಡಂಬಳ್ಳಿಯ ಮತಗಟ್ಟೆ ಸಂಖ್ಯೆ 236ರಲ್ಲಿ ಹಕ್ಕು ಚಲಾಯಿಸಲು 90 ವರ್ಷದ ಜಯಮ್ಮ ಹಾಗೂ 85 ವರ್ಷದ ಚಿಕ್ಕಮ್ಮ ಆಗಮಿಸಿದ್ದರು.