ಬಳ್ಳಾರಿ: ನಗರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಗೊಳಿಸಬೇಕು. ಕೂಡಲೇ ಸ್ವಾಗತ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಮಠಾಧೀಶರು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಸಾಹಿತ್ಯಾಸಕ್ತರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕ ನೇತೃತ್ವದಲ್ಲಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಕಳುಹಿಸಿದರು.
ಸಮ್ಮೇಳನ ಸಂಬಂಧ ಜಿಲ್ಲಾ ಸಚಿವ ಜಮೀರ್ ಖಾನ್ ಸ್ಥಳ ಪರಿಶೀಲನೆ ಮಾಡಿದ್ದಾರೆ. 2025-26ನೇ ಬಜೆಟ್‌ನಲ್ಲಿ ₹10 ಕೋಟಿಯನ್ನು ಸಮ್ಮೇಳನಕ್ಕಾಗಿ ಮೀಸರಿಸಲಾಗಿದೆ. ಈಗಾಗಲೇ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಪದಾಧಿಕಾರಿಗಳು ಬಳ್ಳಾರಿಗೆ ಆಗಮಿಸಿ ಸಭೆಗಳನ್ನು ನಡೆಸಿದ್ದಾರೆ. ಸಮ್ಮೇಳನವನ್ನು ಬೂಕರ್ ಪ್ರಶಸ್ತಿ ಪುರಸ್ಕೃತೆ ಹಾಗೂ ಹಿರಿಯ ಲೇಖಕಿ ಬಾನು ಮುಸ್ತಾಕ್ ಸಮ್ಮೇಳನದ ಸರ್ವಾಧ್ಯಕ್ಷರಾಗಿರಲಿದ್ದಾರೆ ಎಂದು ಈಗಾಗಲೇ ಘೋಷಣೆಯನ್ನು ಸಹ ಮಾಡಲಾಗಿದೆ. ಆದರೆ, ಈವರೆಗೆ ಸಮ್ಮೇಳನ ಕುರಿತಂತೆ ಯಾವುದೇ ಪೂರಕ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಸಹ ಈ ಬಗ್ಗೆ ಯಾವುದೇ ಆಸಕ್ತಿ ತೋರದಿರುವುದು ಕಂಡು ಬರುತ್ತಿದ್ದು, ಇದರಿಂದ ವಿನಾಕಾರಣ ಸಮ್ಮೇಳನ ಮುಂದೂಡಿಕೆಯಾಗುತ್ತಿದೆ ಎಂದು ಮನವಿ ಸಲ್ಲಿಕೆ ವೇಳೆ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ದೂರಿದರು.
ಮುಖ್ಯಮಂತ್ರಿ ಕೂಡಲೇ ಸಮ್ಮೇಳನ ಸಂಬಂಧ ತುರ್ತು ಸಭೆ ನಡೆಸಿ, ದಿನಾಂಕ ಘೋಷಣೆ ಮಾಬೇಕು. ಸಮ್ಮೇಳನ ಯಶಸ್ವಿಯಾಗಿಸುವ ದಿಸೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.ಸಂಡೂರು ವಿರಕ್ತಮಠದ ಪ್ರಭುಸ್ವಾಮಿ ಶ್ರೀ, ಕಮ್ಮರಚೇಡುಮಠದ ಕಲ್ಯಾಣಸ್ವಾಮಿ ಶ್ರೀ, ಎಮ್ಮಿಗನೂರು ಮಠದ ವಾಮದೇವ ಶಿವಾಚಾರ್ಯರು, ಕ್ರೈಸ್ತ ಧರ್ಮಗುರು ಹೆನ್ರಿ ಡಿಸೋಜ, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಗೌರವ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳು, ಮುಸ್ಲಿಂ ಧರ್ಮಗುರು ಖಾಜಿ ಮಹ್ಮದ್ದೀನ್ ಸಿದ್ಧಿಕಿ, ಕಲ್ಲುಕಂಬ ಪಂಪಾಪತಿ, ಲೇಖಕ ರವೀಂದ್ರ ರಾವಿಹಾಳು, ಬಿ.ಎಂ. ಪಾಟೀಲ್, ಅಬ್ದುಲ್ ಹೈ, ಮಹ್ಮದ್ ಆಸಿಫ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.