ಡಾ. ಆನಂದ ಪಾಂಡುರಂಗಿ ಸೇರಿ ಐವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಕನ್ನಡದ ಕುಲಗುರು ಹಾಗೂ ಭಾವೈಕ್ಯತೆಯ ಹರಿಕಾರ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 8ನೇ ಪುಣ್ಯಸ್ಮರಣೆ ಹಾಗೂ ಮರಣವೇ ಮಹಾನವಮಿ ಆಚರಣೆ ಅಂಗವಾಗಿ ಅ. 22ರಂದು ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಮಂಗಳವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವಾರು ದಶಕಗಳಕಾಲ ಸಮಾಜ, ಪರಿಸರ, ಸಾಹಿತ್ಯ ಹಾಗೂ ಕೋಮು ಸೌಹಾರ್ದತೆಗೆ ಅವಿರತ ಶ್ರಮಿಸಿದ ಶ್ರೀಗಳ ಸ್ಮರಣಾರ್ಥವಾಗಿ ವಿದ್ಯಾಪೀಠದ ನೌಕರರು ಸ್ಥಾಪಿಸಿರುವ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ತಲಾ ₹ಒಂದು ಲಕ್ಷ ರುಪಾಯಿ ಗೌರವಧನದೊಂದಿಗೆ ಕಲಬುರಗಿಯ ಮಾಜಿ ಕಾರ್ಮಿಕ ಸಚಿವ ಡಾ. ಎಸ್.ಕೆ. ಕಾಂತಾ, ಧಾರವಾಡದ ಖ್ಯಾತ ಮನೋವೈದ್ಯ ದಿ. ಡಾ. ಆನಂದ ಪಾಂಡುರಂಗಿ (ಮರಣೋತ್ತರ), ಬೆಳಗಾವಿ ಜಿಲ್ಲೆ ಹಾರೂಗೇರಿಯ ಶರಣ ವಿಚಾರವಾಹಿನಿ ಅಧ್ಯಕ್ಷ ಐ.ಆರ್. ಮಠಪತಿ, ಬೆಂಗಳೂರಿನ ಬಸವ ಮೀಡಿಯಾ ಹಾಗೂ ಬೀದರ್ನ ಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದರು.ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವದ ಅಂಗವಾಗಿ ಪಾಲಾ-ಬದಾಮಿ ರಸ್ತೆಯಲ್ಲಿ ನಿರ್ಮಿಸಲಾದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸುವರ್ಣ ಸೌಧ ಲೋಕಾರ್ಪಣೆಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ನೌಕರರ ಪತ್ತಿನ ಸಹಕಾರಿ ಸಂಘದ ವತಿಯಿಂದ ಶ್ರೀಗಳ 10 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ನಗರದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ, ಕೆ.ಎಸ್. ಚಟ್ಟಿ, ಶೇಖರಣ್ಣ ಕವಳಿಕಾಯಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ, ಅಮರೇಶ ಅಂಗಡಿ ಮುಂತಾದವರಿದ್ದರು.