ರೈಲ್ವೇ ಅಭಿವೃದ್ಧಿ ಕಾಮಗಾರಿಗಳಿಗೆ ₹9000 ಕೋಟಿ:ಸಚಿವ ವಿ. ಸೋಮಣ್ಣ

KannadaprabhaNewsNetwork |  
Published : Oct 13, 2026, 01:30 AM IST
ಪೋಟೋ: 12ಎಸ್‌ಎಂಜಿಕೆಪಿ01: ವಿ. ಸೋಮಣ್ಣ | Kannada Prabha

ಸಾರಾಂಶ

ಕೊಂಕಣ ರೈಲ್ವೆಯ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ 9000 ಕೋಟಿ ರು.ಗಳನ್ನು ಮಂಜೂರು ಮಾಡುವುದರ ಜೊತೆಗೆ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ರಾಜ್ಯದ ರೈಲ್ವೇ ಕ್ಷೇತ್ರದ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೊಂಕಣ ರೈಲ್ವೆಯ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ 9000 ಕೋಟಿ ರು.ಗಳನ್ನು ಮಂಜೂರು ಮಾಡುವುದರ ಜೊತೆಗೆ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ರಾಜ್ಯದ ರೈಲ್ವೇ ಕ್ಷೇತ್ರದ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಮೂಲಸೌಕರ್ಯ ಯೋಜನೆಗಳು ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಪ್ರಗತಿಯನ್ನು ಪರಿಶೀಲಿಸಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ 52000 ಕೋಟಿ ರು. ವೆಚ್ಚದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಮುಂದಿನ 25 ರಿಂದ 30ವರ್ಷಗಳ ಅವಧಿಯ ದೂರದೃಷ್ಟಿಯನ್ನಿಟ್ಟುಕೊಂಡು ರೈಲ್ವೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದ ಅವರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಯೋಜನೆಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ, ಅಂದಿನ ಟಂಡರ್‌ನ್ನು ರದ್ದುಗೊಳಿಸಿ, ಮುಂದಿನ ಎರಡು ತಿಂಗಳೊಳಗಾಗಿ ಹೊಸ ಟೆಂಡರ್‌ ಆಹ್ವಾನಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಹೆಚ್ಚಿಸುವುದಾಗಿ ತಿಳಿಸಿದರು. ಶಿವಮೊಗ್ಗ-ಬೀರೂರು ರೈಲ್ವೆ ಮಾರ್ಗದ ಡಬ್ಲಿಂಗ್‌ಗೆ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ. ಶೃಂಗೇರಿ-ಶಿವಮೊಗ್ಗ ಹೊಸ ರೈಲು ಮಾರ್ಗದ ಪ್ರಸ್ತಾವನೆಯೂ ಪ್ರಗತಿಯಲ್ಲಿದೆ ಎಂದರು.

ಕೇಂದ್ರ ಸರ್ಕಾರವು ಹೊಸ ರೈಲ್ವೆ ಯೋಜನೆಗಳಿಗೆ, ವಿಸ್ತೃತ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದೆ. ವಿಶೇಷವಾಗಿ ಮಂಗಳೂರು, ಉಡುಪಿ, ಶಿವಮೊಗ್ಗ ಭಾಗಗಳ ರೈಲ್ವೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಪರಿಶೀಲಿಸಲಾಗಿದೆ. 2018ರಲ್ಲಿ ಅನುಮೋದಿತಗೊಂಡಿದ್ದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೇ ಮಾರ್ಗಕ್ಕೆ 2025ರಲ್ಲಿಯೇ ಅಂತಿಮ ಹಂತದ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

178ಕಿ.ಮೀ. ದೂರದ ತಾಳಗುಪ್ಪ-ಸಿದ್ಧಾಪುರ-ಸಿರ್ಸಿ-ಮುಂಡಗೋಡ-ಹುಬ್ಬಳ್ಳಿ ಮಾರ್ಗದ ಸರ್ವೇ ಕಾರ್ಯವನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. 1511ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವ ತಾಳಗುಪ್ಪ-ಹೊನ್ನಾವರ ಹೊಸ ಮಾರ್ಗಕ್ಕೆ 2025ರಲ್ಲಿಯೇ ಅನುಮೋದನೆ ನೀಡಲಾಗಿದೆ. ಭದ್ರಾವತಿ-ಚಿಕ್ಕಬಾಸೂರು-ಚನ್ನಗಿರಿಯ 173ಕಿ.ಮೀ. ವ್ಯಾಪ್ತಿಯ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಸರ್ವೇ ಕಾರ್ಯ ಆರಂಭಗೊಳ್ಳಲಿದೆ. ಇದರೊಂದಿಗೆ ಚಿಕ್ಕಮಗಳೂರು-ಶೃಂಗೇರಿ, ಹುಬ್ಬಳ್ಳಿ-ಅಂಕೋಲ, ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ ಮಾರ್ಗದ ಸಮೀಕ್ಷೆಗೂ ಸೂಚಿಸಲಾಗಿದೆ ಎಂದರು.

100ಕೋ. ರೂ.ಗಳ ಅಂದಾಜು ವೆಚ್ಚದಲ್ಲಿ ತುಮಕೂರು ಮತ್ತು 50ಕೋ. ರೂ.ಗಳ ಅಂದಾಜು ವೆಚ್ಚದಲ್ಲಿ ಶಿವಮೊಗ್ಗ ನಗರಗಳ ರೈಲ್ವೇ ನಿಲ್ದಾಣಗಳನ್ನು ಅತ್ಯಾಧುನಿಕ ನಿಲ್ದಾಣಗಳನ್ನಾಗಿ ಮಾರ್ಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಸಾಗರ ಮತ್ತು ತಾಳಗುಪ್ಪ ರೈಲ್ವೇ ನಿಲ್ದಾಣಗಳನ್ನು ಉದ್ಘಾಟಿಸಲಾಗುವುದು. ಭದ್ರಾವತಿ ರೈಲ್ವೇ ನಿಲ್ದಾಣವನ್ನೂ ಶಿವಮೊಗ್ಗ ರೈಲ್ವೇ ನಿಲ್ದಾಣದ ರೀತಿಯಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಕೋಟೆಗಂಗೂರು ಕೋಚಿಂಗ್‌ ಡಿಪೋವನ್ನು ಮುಂದಿನ ವರ್ಷಾರಂಭದಲ್ಲಿ ಲೋಕಾರ್ಪಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ಟರ್ಮಿನಲ್‌ ನಿರ್ಮಾಣಕ್ಕೆ 97 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೇ ನಿರೀಕ್ಷೆಯಂತೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ರೈಲ್ವೇ ಮೇಲ್ಸೇತುವೆಗಳು, ಕೆಳಸೇತುವೆಗಳನ್ನು ನಿರ್ಮಿಸಿ, ಅತ್ಯಲ್ಪ ಅವಧಿಯಲ್ಲಿ ಲೋಕಾರ್ಪಣೆಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ. ರೈಲ್ವೇ ಕ್ಷೇತ್ರದಲ್ಲಿ ಕೈಗೊಂಡ ಕ್ರಾಂತಿಕಾರಿ ಯೋಜನೆಗಳ ವ್ಯವಸ್ಥಿತ ಅನುಷ್ಠಾನದಿಂದಾಗಿ ರೈಲ್ವೇ ಅಫಘಾತದ ಪ್ರಮಾಣ ಶೇ 0.01ಕ್ಕೆ ಬಂದು ನಿಂತಿದೆ ಎಂದರು.

ಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ರೈಲ್ವೇ ಪ್ರಾದೇಶಿಕ ವ್ಯವಸ್ಥಾಪಕ ಉದಿತ್‌ ಮಿತ್ತಲ್‌, ಎಸ್.ದತ್ತಾತ್ರಿ, ಎ.ಎಸ್.ನವೀನ್‌ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸಚಿವ ವಿ.ಸೋಮಣ್ಣ ಕಾರಿಗೆ ಮುತ್ತಿಗೆ ಯತ್ನ
ಬಿಎಸ್‌ಸಿ ಕುಟುಂಬದ ಶ್ರಮ ನಿಜಕ್ಕೂ ಶ್ಲಾಘನೀಯ: ಬಿ.ಎಸ್. ಯಡಿಯೂರಪ್ಪ