ಸುಸೂತ್ರವಾಗಿ ಪರೀಕ್ಷೆ ಬರೆದ 9,257 ವಿದ್ಯಾರ್ಥಿಗಳು

KannadaprabhaNewsNetwork |  
Published : Mar 19, 2026, 02:15 AM IST
 | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬುಧವಾರ ಅತ್ಯಂತ ಶಾಂತಿಯುತವಾಗಿ ಆರಂಭಗೊಂಡಿವೆ.

ಸಿಸಿಟಿವಿ ಕಣ್ಗಾವಲಿನಲ್ಲಿ ಶಾಂತಿಯುತವಾಗಿ ಆರಂಭ

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಾದ್ಯಂತ ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬುಧವಾರ ಅತ್ಯಂತ ಶಾಂತಿಯುತವಾಗಿ ಆರಂಭಗೊಂಡಿವೆ. ಮೊದಲ ದಿನದಂದು ಪ್ರಥಮ ಭಾಷೆಗಳಾದ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಪರೀಕ್ಷೆಗಳು ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳಿಲ್ಲದೆ ಸುಸೂತ್ರವಾಗಿ ನಡೆದಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆದರು.

ಕಾರವಾರ ಶೈಕ್ಷಣಿಕ ಜಿಲ್ಲೆಯ ಒಟ್ಟು 39 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಪ್ರಕ್ರಿಯೆ ನಡೆಯಿತು. ಒಟ್ಟು 9,361 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 9,257 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 104 ಅಭ್ಯರ್ಥಿಗಳು ಮೊದಲ ದಿನದ ಪರೀಕ್ಷೆಗೆ ಗೈರಾಗಿರುವುದು ದಾಖಲಾಗಿದೆ. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷ ಕಾಣಿಸಿಕೊಂಡಿಲ್ಲ.

ತಾಲೂಕುವಾರು ಗೈರುಹಾಜರಾತಿಯ ವಿವರ ಗಮನಿಸಿದರೆ, ಭಟ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 35 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಾರವಾರದಲ್ಲಿ 28, ಹೊನ್ನಾವರದಲ್ಲಿ 23, ಕುಮಟಾದಲ್ಲಿ 12 ಹಾಗೂ ಅಂಕೋಲಾದಲ್ಲಿ 6 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ. ಗೈರಾದವರಲ್ಲಿ ಖಾಸಗಿ ಅಭ್ಯರ್ಥಿಗಳು ಹಾಗೂ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಬಾರದವರೂ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿತ್ತು. ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವೆಬ್‌ಕಾಸ್ಟಿಂಗ್ ವ್ಯವಸ್ಥೆಯ ಮೂಲಕ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಕಚೇರಿಯಿಂದಲೇ ನೇರ ನಿಗಾ ವಹಿಸಿದ್ದರು. ಹಿರಿಯ ಅಧಿಕಾರಿಗಳ ತಂಡವು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಪಾವಿತ್ರ್ಯತೆ ಪರಿಶೀಲಿಸಿತು.

ಪ್ರಶ್ನೆಪತ್ರಿಕೆ ಸುರಕ್ಷಿತವಾಗಿ ತಲುಪಿಸುವುದು ಮತ್ತು ಪರೀಕ್ಷಾ ಅಕ್ರಮ ತಡೆಯಲು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಜಾಗೃತ ದಳಗಳನ್ನು ನೇಮಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮೊದಲ ದಿನ ಯಾವುದೇ ನಕಲು ಅಥವಾ ಅಕ್ರಮ ಪ್ರಕರಣಗಳು ವರದಿಯಾಗದೇ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಯುಗಾದಿಯ ಸಂಭ್ರಮ: ಆದರೆ ಕೂಡ್ಲಿಗಿಯಲ್ಲಿ ಸೂತಕದ ಛಾಯೆ!
ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್