ಮುಂಡರಗಿ: ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರಶ್ವರ ಜಾತ್ರಾ ಮಹೋತ್ಸವ ಮಾ. 23ರಿಂದ 25ರವರೆಗೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಚಂದ್ರು ಲಮಾಣಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಆಗಮಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ಡಾ. ನಿಂಗು ಸೊಲಗಿ ಉಪನ್ಯಾಸ ನೀಡುವರು. ಉತ್ತಂಗಿಯ ಸಂಗೀತಾ ಅಬ್ಬಿಗೇರಿಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ದೇವರ ಹುಬ್ಬಳ್ಳಿಯ ಮಿಮಿಕ್ರಿ ಕಲಾವಿದ ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ್ ಹಾಗೂ ಯಮನೂರಿನ ಹಾಸ್ಯ ಕಲಾವಿದ ಶರಣು ಯಮನೂರ ಅವರಿಂದ ಹಾಸ್ಯೋತ್ಸವ ಮತ್ತು ಇಂಗಳಗಿಯ ಪ್ರಶಾಂತಕುಮಾರ ತಡಸದ ಅವರಿಂದ ಜನಪದ ಕಾರ್ಯಕ್ರಮ ಜರುಗಲಿವೆ.ನಾನು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷನಾದ ಮೇಲೆ ಕಮಿಟಿಯ ಎಲ್ಲ ಸದಸ್ಯರ ಹಾಗೂ ದೇವಸ್ಥಾನದ ಭಕ್ತರ ಸಹಕಾರ ಹಾಗೂ ಸಲಹೆ, ಸೂಚನೆ ಮೇರೆಗೆ ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಜತೆಗೆ ಆವರಣದಲ್ಲಿರುವ ಭದ್ರಕಾಳಮ್ಮ ಹಾಗೂ ಈಶ್ವರ ದೇವಸ್ಥಾನವನ್ನು ಸಹ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆಗಾಗಿ ಸುಸಜ್ಜಿತವಾದ ಸುಮಾರು 60ಕ್ಕೂ ವಸತಿ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಪರಿಸರ ಕಾಳಜಿ ವಹಿಸುವ ಮೂಲಕ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತ ಮತ್ತು ದೇವಸ್ಥಾನದ ಮುಂದೆ ಇರುವ ಉದ್ಯಾನವನದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ದೇವಸ್ಥಾನದ ಸಮೀಪದಲ್ಲಿದ್ದ ಪುರಾತನ ನಾಗದೇವಸ್ಥಾನವನ್ನು ಬಳ್ಳಾರಿ ಡಾ. ಶಿದ್ದಲಿಂಗಪ್ಪ ಕರ್ಜಗಿ ಜೀರ್ಣೋದ್ಧಾರ ಮಾಡಿಸಿದ್ದಾರೆ. ಅಲ್ಲದೇ ದೇವಸ್ಥಾನ ಆವರಣದಲ್ಲಿ ವಿಘ್ನನಾಶಕ ಗಣೇಶನ ದೇವಸ್ಥಾನವನ್ನೂ ನಿರ್ಮಾಣ ಮಾಡಲಾಗಿದೆ.
ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಶೇಖಣ್ಣ ಬಾಲೇಹೊಸೂರು ಹಾಗೂ ಸದಸ್ಯ ಕೊಟ್ರೇಶ ಬಳ್ಳೊಳ್ಳಿ ಮಾತನಾಡಿ, ಈ ಭಾಗದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲೊಂದು ನವಿಲುಧಾಮ ನಿರ್ಮಾಣ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಒತ್ತಾಯಿಸಿದರು.