ರೌಡಿಗಳಿಗೆ ಬೆವರಿಳಿಸಿದ ಎಸ್‌ಪಿ ಜಾಹ್ನವಿ

KannadaprabhaNewsNetwork |  
Published : Mar 19, 2026, 02:15 AM IST
ಫೋಟೋವಿವರ- (18ಎಚ್‌ಪಿಟಿ2) ಹೊಸಪೇಟೆಯ ಡಿಆರ್‌ ಮೈದಾನದಲ್ಲಿ ಬುಧವಾರ ನಡೆದ ಈ ವಿಶೇಷ ರೌಡಿ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಎಸ್. ಜಾಹ್ನವಿ ಅವರು ರೌಡಿಶೀಟರ್‌ಗಳಿಗೆ ಬೆವರಿಳಿಸುವಂತೆ ಪರೇಡ್ ನಡೆಸಿದರು | Kannada Prabha

ಸಾರಾಂಶ

ಹೊಸಪೇಟೆಯ ಡಿಆರ್‌ ಮೈದಾನದಲ್ಲಿ ಬುಧವಾರ ನಡೆದ ಈ ವಿಶೇಷ ರೌಡಿ ಪರೇಡ್‌ನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳ ವ್ಯಾಪ್ತಿಯ 220 ರೌಡಿ ಶೀಟರ್‌ಗಳು ಭಾಗವಹಿಸಿದರು.

ಹೊಸಪೇಟೆ: ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಎಸ್‌ಪಿ ಎಸ್.ಜಾಹ್ನವಿ ರೌಡಿಶೀಟರ್‌ಗಳಿಗೆ ಬೆವರಿಳಿಸುವಂತೆ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದರು.

ಹೊಸಪೇಟೆಯ ಡಿಆರ್‌ ಮೈದಾನದಲ್ಲಿ ಬುಧವಾರ ನಡೆದ ಈ ವಿಶೇಷ ರೌಡಿ ಪರೇಡ್‌ನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳ ವ್ಯಾಪ್ತಿಯ 220 ರೌಡಿ ಶೀಟರ್‌ಗಳು ಭಾಗವಹಿಸಿದರು.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಕಣ್ಣಿಟ್ಟಿರುವ ಪೊಲೀಸ್ ಇಲಾಖೆ, ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಪರೇಡ್ ವೇಳೆ ರೌಡಿ ಶೀಟರ್‌ಗಳನ್ನು ಸಾಲುಗಟ್ಟಿ ನಿಲ್ಲಿಸಿ, ಶಿಸ್ತು, ವರ್ತನೆ ಹಾಗೂ ಕಾನೂನು ಪಾಲನೆ ಕುರಿತು ಎಸ್‌ಪಿ ಜಾಹ್ನವಿ ಅವರು ರೌಡಿ ಶೀಟರ್‌ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಪರಾಧ ಚಟುವಟಿಕೆಗಳಿಂದ ದೂರ ಇರಬೇಕು. ಸುಧಾರಣೆಗೆ ಪ್ರತಿದಿನವೂ ಅವಕಾಶ ಇದೆ. ಒಳ್ಳೆಯ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕುವಂತೆ ಎಂದು ಅವರು ಸಲಹೆ ನೀಡಿದರು.

ಇದೇ ವೇಳೆ “ಒಮ್ಮೆ ಎಚ್ಚರಿಕೆ ನೀಡಿದ ಬಳಿಕವೂ ಚಟುವಟಿಕೆಗಳು ಮುಂದುವರಿದರೆ, ಇದಕ್ಕಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸಂದೇಶ ನೀಡಿದರು.

ರೌಡಿಗಳಲ್ಲಿ ಕೆಲವರು ಪರೇಡ್ ವೇಳೆ ಸರಿಯಾಗಿ ನಿಲ್ಲದೇ ನಿರ್ಲಕ್ಷ್ಯ ತೋರಲು ಯತ್ನಿಸಿದಾಗ, “ಮೊದಲು ಸರಿಯಾಗಿ ನಿಲ್ಲೋದು ಕಲಿಯಿರಿ. ಯಾವ ಸಣ್ಣ ಕೇಸ್‌ನಲ್ಲಿ ಇರುವವನು ನೀನು? ಓವರ್ ಸ್ಮಾರ್ಟ್ ಆಗಿ ಆಡಬೇಡಿ ಎಂದು ಎಸ್‌ಪಿ ಜಾಹ್ನವಿ ಅವರು ಗೌಡಿ ಶೀಟರ್‌ಗಳಿಗೆ ಬೆವರಿಳಿಸಿದರು.

ಇದೇ ವೇಳೆ 15 ರೌಡಿ ಶೀಟರ್‌ಗಳಿಗೆ ಗಡಿಪಾರು ಮಾಡಲು ಸೂಚನೆ ನೀಡಿದರು. ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ವಿಜಯನಗರ ಜಿಲ್ಲೆಯಾದ್ಯಂತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್‌ಪಿ ಜಾಹ್ನವಿ ಅವರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಎಎಸ್‌ಪಿ ಮಂಜುನಾಥ, ಡಿವೈಎಸ್‌ಪಿ ಡಾ. ಟಿ. ಮಂಜುನಾಥ ಸೇರಿದಂತೆ 21 ಪೊಲೀಸ್ ಠಾಣೆಗಳ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಯುಗಾದಿಯ ಸಂಭ್ರಮ: ಆದರೆ ಕೂಡ್ಲಿಗಿಯಲ್ಲಿ ಸೂತಕದ ಛಾಯೆ!
ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್