ಕನ್ನಡಪ್ರಭ ವಾರ್ತೆ ತುಮಕೂರು
ನಗರದಲ್ಲಿ ₹9 ಕೋಟಿ ವೆಚ್ಚದಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಸಂತೋಷದ ವಿಚಾರವಾಗಿದ್ದು, ಶಿಕ್ಷಕರ ಭವನಕ್ಕೆ ಶಾಸಕ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಇನ್ನಿತರ ಮೂಲಗಳಿಂದ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಭರವಸೆ ನೀಡಿದ್ದಾರೆ.ನಗರದ ಡಾ.ರಾಧಾಕೃಷ್ಣ ರಸ್ತೆಯಲ್ಲಿರುವ ಡಿಡಿಪಿಐ ಕಚೇರಿ ಪಕ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಿಕ್ಷಕರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬಹಳ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಪ್ರಾಥಮಿಕದಿಂದ ಪಿಯುವರೆಗಿನ ಎಲ್ಲಾ ಶಿಕ್ಷಕರು ಸೇರಿ ಶಿಕ್ಷಕರ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸುಮಾರು ೯ ಕೋಟಿ ಅಂದಾಜಿನ ಈ ಕಟ್ಟಡಕ್ಕೆ ಸರ್ಕಾರದಿಂದಲೂ ಹೆಚ್ಚಿನ ಮೊತ್ತದ ಅನುದಾನ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ನಿಮಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಿದ್ದೇವೆ ಎಂದರು.ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ಮಾತನಾಡಿ, ಶಿಕ್ಷಣ ಇಲಾಖೆಯ ಮೂಲ ಸ್ವರೂಪಗಳಲ್ಲಿ ಶಿಕ್ಷಕರ ಭವನವೂ ಒಂದು. ಹಾಗಾಗಿ ಎಲ್ಲಾ ಶಿಕ್ಷಕರು ಸೇರಿ ಶಿಕ್ಷಕರ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳು ಶಿಕ್ಷಣ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವಂತಹ ಇಲಾಖೆಗಳೇ ಆಗಿವೆ. ಒಂದು ದೇಶದ ಬೆಳವಣಿಗೆಯನ್ನು ಅಳೆಯುವುದು ಅಲ್ಲಿಯ ಮಾನವ ಸಂಪನ್ಮೂಲ ಬಳಕೆ ಆಧಾರದ ಮೇಲೆ. ಆ ಮಾನವ ಸಂಪನ್ಮೂಲವನ್ನು ಸೃಜಿಸುವ ಗುರುತರ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ. ಹಾಗಾಗಿ ಶಿಕ್ಷಣ ಇಲಾಖೆಯ ಪ್ರತಿಯೊಂದು ಕೆಲಸವೂ ಮೌಲ್ಯಯುತವಾದುದ್ದು, ನಿಮ್ಮ ಎಲ್ಲಾ ಕಾರ್ಯಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ತುಮಕೂರು ಜಿಲ್ಲೆ ರಾಜ್ಯದಲ್ಲಿ ಶೈಕ್ಷಣಿಕವಾಗಿ ಅತಿ ದೊಡ್ಡ ಜಿಲ್ಲೆ. ಇಲ್ಲಿನ ಶೈಕ್ಷಣಿಕ ವಾತಾವರಣ ಸದೃಢಗೊಂಡರೆ ಇಡೀ ನಾಡಿಗೆ ಒಂದು ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸರಿಯಾದ ಹೆಜ್ಜೆಗಳನಿಟ್ಟು, ಶಿಕ್ಷಕರ ಭವನ ಯಾವುದೇ ಲೋಪದೋಷವಿಲ್ಲದೆ ಇಡೀ ರಾಜ್ಯಕ್ಕೆ ಮಾದರಿಯಾದ ಅತ್ಯಂತ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸುವ ಅಗತ್ಯವಿದೆ. ಶಿಕ್ಷಕರ ಭವನ ಶಿಕ್ಷಕರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತಹ ಕಟ್ಟಡವಾಗಬೇಕು. ತರಬೇತಿ, ಕೌಶಲ್ಯಾಭಿವೃದ್ಧಿ, ಕ್ರೀಡಾ ಚಟುವಟಿಕೆ, ಮನರಂಜನಾ ವೇದಿಕೆ ಎಲ್ಲವೂ ಆಗಿ ಶಿಕ್ಷಕರ ಭವನ ಬಳಕೆಯಾಗು ವಂತೆ ಸಮಗ್ರವಾಗಿ ನಿರ್ಮಿಸಬೇಕೆಂದು ಸಲಹೆ ನೀಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪರಶಿವಮೂರ್ತಿ.ಆರ್.ಮಾತನಾಡಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಶಿಕ್ಷಕರ ಭವನದ ಶಂಕುಸ್ಥಾಪನೆಯನ್ನು ಇಂದು ಹಮ್ಮಿಕೊಳ್ಳಲಾಗಿದೆ. ಸುಮಾರು ೯ ಕೋಟಿ ರು.ಗಳಲ್ಲಿ ಎಲ್ಲಾ ರೀತಿಯಿಂದ ಶಿಕ್ಷಕರ ಸಮಗ್ರ ವಿಕಾಸಕ್ಕೆ ಪೂರಕವಾಗಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಜಿಲ್ಲಾ ಶಿಕ್ಷಕರ ಭವನ ಸಮಿತಿಯ ಬಳಿ 40 ಲಕ್ಷ ರು.ಮಾತ್ರ ಅನುದಾನವಿದೆ. ಇದರ ಜೊತೆಗೆ ಶಾಸಕರಾದ ಜಿ.ಬಿ.ಜೋತಿಗಣೇಶ್ ಅವರು ಸಹ ಹೆಚ್ಚಿನ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಆದರೂ ಸರ್ಕಾರದಿಂದ ಹೆಚ್ಚಿನ ಅನುದಾನದ ಅಗತ್ಯ ವಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ನಮ್ಮ ಶಿಕ್ಷಕರ ಭವನಕ್ಕೆ ಹೆಚ್ಚಿನ ಅನುದಾನ ನೀಡಿ ಭವನ ಪೂರ್ಣಗೊಳ್ಳಲು ಸಹಕಾರ ನೀಡಬೇಕು. ಎಸ್‌ಡಬ್ಲ್ಯು ಮತ್ತು ಡಿಡಬ್ಲ್ಯು ಅನುದಾನದಲ್ಲಿ ₹1 ಕೋಟಿ ನೀಡಲು ಒಪ್ಪಿಗೆ ದೊರೆತಿದೆ. ಉಳಿದ ಅನುದಾನ ದಾನಿಗಳು ಹಾಗೂ ಸಚಿವರು ಮತ್ತು ಶಾಸಕರ ಅನುದಾನವನ್ನ ಪಡೆಯಬೇಕೆಂಬ ಇಚ್ಚೆಯಿದೆ. ಶಿಕ್ಷಕರ ಭವನ ನಿರ್ಮಾ ಣಕ್ಕೆ ಎಲ್ಲಾ ಶಿಕ್ಷಕ ಬಂಧುಗಳು, ಸರ್ಕಾರಿ ನೌಕರರು ತಮ್ಮ ಕೈಲಾದ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ಡಿಡಿಪಿಐ ರಂಗಧಾಮಯ್ಯ.ಸಿ, ಪಿಯು ಡಿಡಿ ಗಂಗಾಧರ್, ಬಿಇಓ ಡಾ.ಸೂರ್ಯಕಲಾ, ಜಿಲ್ಲಾ ಶಿಕ್ಷಕರ ಭವನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಚಿಕ್ಕಣ್ಣ, ಟಿ.ಎಸ್.ಖಜಾಂಚಿ ಮಂಜುನಾಥ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮಶಿವಮೂರ್ತಿ.ಆರ್, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ ರೆಡ್ಡಿ, ಸರ್ಕಾರಿ ನೌಕರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಡಿವೈಪಿಸಿ ರಂಗಧಾಮಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಶಿಕ್ಷಕರ ಸಂಘಗಳ ಪದಾಧಿಕಾರಿ ಗಳು, ಸದಸ್ಯರುಗಳು ಹಾಜರಿದ್ದರು.