ಮರು ನಿರ್ಮಾಣವಾಗಲಿರುವ ಮೆಜೆಸ್ಟಿಕ್‌ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ: 9 ಮಹಡಿ ಕಟ್ಟಡ

KannadaprabhaNewsNetwork |  
Published : Nov 19, 2024, 12:45 AM ISTUpdated : Nov 19, 2024, 01:21 PM IST
Railway 1 | Kannada Prabha

ಸಾರಾಂಶ

ಮರು ನಿರ್ಮಾಣವಾಗಲಿರುವ ಮೆಜೆಸ್ಟಿಕ್‌ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಒಂಬತ್ತು ಮಹಡಿಯ ಮುಖ್ಯ ಕಟ್ಟಡ, ಮೂರು ಪ್ರವೇಶ ದ್ವಾರ, ಮಲ್ಟಿಲೇವಲ್‌ ಕಾರ್‌ ಪಾರ್ಕಿಂಗ್‌ ನಿರ್ಮಿಸಲು ನೈಋತ್ಯ ರೈಲ್ವೆ ಯೋಜನೆ ರೂಪಿಸಿಕೊಂಡಿದೆ.  

ಮಯೂರ್ ಹೆಗಡೆ

 ಬೆಂಗಳೂರು : ಮರು ನಿರ್ಮಾಣವಾಗಲಿರುವ ಮೆಜೆಸ್ಟಿಕ್‌ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಒಂಬತ್ತು ಮಹಡಿಯ ಮುಖ್ಯ ಕಟ್ಟಡ, ಮೂರು ಪ್ರವೇಶ ದ್ವಾರ, ಮಲ್ಟಿಲೇವಲ್‌ ಕಾರ್‌ ಪಾರ್ಕಿಂಗ್‌ ನಿರ್ಮಿಸಲು ನೈಋತ್ಯ ರೈಲ್ವೆ ಯೋಜನೆ ರೂಪಿಸಿಕೊಂಡಿದೆ. ಜತೆಗೆ ಹೆಚ್ಚುವರಿ ಎರಡು ಪ್ಲಾಟ್‌ಫಾರ್ಮ್ ರಚಿಸಲು ತೀರ್ಮಾನಿಸಲಾಗಿದೆ.

ಈಗಿರುವ ರೈಲ್ವೆ ನಿಲ್ದಾಣ 1968ರಲ್ಲಿ ನಿರ್ಮಾಣಗೊಂಡಿದೆ. 56 ವರ್ಷದ ಬಳಿಕ ಕೆಎಸ್‌ಆರ್‌ ನಿಲ್ದಾಣವನ್ನು ಮರು ನಿರ್ಮಿಸಲು ಯೋಜನೆ ಸಿದ್ಧಗೊಂಡಿದ್ದು, ಪ್ರಾಥಮಿಕ ವರದಿ ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಿದೆ. ಅನುಮೋದನೆ ದೊರೆತ ಬಳಿಕ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ₹1500 ಕೋಟಿ ಮೊತ್ತದಲ್ಲಿ ಕೆಎಸ್‌ಆರ್‌ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಲ್ಲಿ ಆಧುನೀಕರಿಸಲಾಗುವುದು ಎಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಇತ್ತಿಚೆಗೆ ತಿಳಿಸಿದ್ದಾರೆ.

9 ಮಹಡಿ ಕಟ್ಟಡ:

ಸದ್ಯ ನಿಲ್ದಾಣದ ಮುಖ್ಯ ಕಟ್ಟಡ ಜಿ+2 ಮಾದರಿಯಲ್ಲಿದೆ. ಪ್ರಸ್ತಾವಿತ ಯೋಜನೆಯಲ್ಲಿ ನಿಲ್ದಾಣದ ಮುಖ್ಯ ಕಟ್ಟಡ, ಎರಡನೇ ಪ್ರವೇಶ ದ್ವಾರದ ಕಟ್ಟಡ (ಈಗಿರುವುದು) ಹಾಗೂ ಪಾರ್ಸೆಲ್‌ ನಿರ್ವಹಣೆ ಕಟ್ಟಡ (ಜಿ+5) ಸೇರಿ ಮೂರು ಕಟ್ಟಡಗಳನ್ನು ಒಳಗೊಂಡಿರಲಿದೆ. ಒಟ್ಟಾರೆ 2,45,926 ಚದರ ಮೀಟರ್‌ ವ್ಯಾಪ್ತಿಯ ಯೋಜನೆಯಿದು. ಮುಖ್ಯ ಕಟ್ಟಡವು 1,27,044 ಚ.ಮೀ. ಸ್ಥಳಾವಕಾಶ ಇರಲಿದೆ. ಇಲ್ಲಿ ಎರಡು ತಳಮಹಡಿ, ನೆಲಮಹಡಿ ಸೇರಿ 9 ಮಹಡಿಗಳ ನಿರ್ಮಿಸಲು ಉದ್ದೇಶಿಸಲಾಗಿದೆ. ಪಾರ್ಸೆಲ್‌ ಕಟ್ಟಡ ಜಿ+4 ಮಾದರಿಯಲ್ಲಿರಲ್ಲಿದೆ.

45 ಲಿಫ್ಟ್‌/60 ಎಸ್ಕಲೇಟರ್‌: ಮುಖ್ಯ ನಿಲ್ದಾಣದ ಮೇಲಿನ ನಾಲ್ಕು ಮಹಡಿಗಳನ್ನು ವಾಣಿಜ್ಯ ಉದ್ದೇಶಗಳಿಗೆ ಮೀಸಲಿಡಲಾಗುವುದು. ನಂತರದ ಎರಡು ಮಹಡಿಗಳಲ್ಲಿ ಸ್ಟೇಷನ್‌ ಕಚೇರಿಗಳು ಇರಲಿವೆ. ನಂತರ ಕಾನ್‌ಕಾರ್ಸ್ ಲೇವಲ್‌ ಇರಲಿದೆ. ಇಲ್ಲಿಯೂ ಪ್ರಯಾಣಿಕರಿಗೆ ಅಗತ್ಯವಾದ ವೇಟಿಂಗ್ ರೂಂ, ಶೌಚಾಲಯ, ಕುಡಿವ ನೀರು, ಹೋಟೆಲ್‌, ಮಳಿಗೆಗಳು ಇರಲಿವೆ. ನಂತರ ಪ್ಲಾಟ್‌ಫಾರ್ಮ್‌ ಇರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಮುಖ್ಯ ಕಟ್ಟಡದಲ್ಲಿ 6 ಲಿಫ್ಟ್‌, ಕಾನ್‌ಕಾರ್ಸ್‌ನಲ್ಲಿ 15 ಸೇರಿ ಹೊಸ ಕಟ್ಟಡಗಳಲ್ಲಿ ಒಟ್ಟಾರೆ 45 ಲಿಫ್ಟ್‌ಗಳು ಇರಲಿವೆ. ಜೊತೆಗೆ ಮುಖ್ಯ ಕಟ್ಟಡದಲ್ಲಿ 14 ಸೇರಿ ಒಟ್ಟಾರೆ 60 ಎಸ್ಕಲೇಟರ್‌ಗಳು ಇರಲಿವೆ.

ಸಂಪರ್ಕ ವ್ಯವಸ್ಥೆ: ರೈಲ್ವೆ ನಿಲ್ದಾಣವು ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಉಪನಗರ ರೈಲು ಹಾಗೂ ಮೆಟ್ರೋಗೆ ಸಂಪರ್ಕ ಹೊಂದಿರಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಉಪನಗರ ರೈಲಿಗಾಗಿ ಸ್ಕೈವಾಕ್‌, ವಿಶೇಷವಾಗಿ 4 ಟ್ರಾವೆಲೆಟರ್ ವ್ಯವಸ್ಥೆ ಇರಲಿದೆ. ಇದರ ಜೊತೆಗೆ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕಿಸುವಂತೆ ನೀಲನಕ್ಷೆ ಸಿದ್ಧಪಡಿಸಿಕೊಳ್ಳಲಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ: ಸದ್ಯದ ನಿಲ್ದಾಣದಲ್ಲಿ ಬಸ್‌, ಕಾರುಗಳಿಗೆ ಪಿಕಪ್‌, ಡ್ರಾಪ್‌ಗೆ ಪ್ರತ್ಯೇಕ ಸ್ಥಳವಿಲ್ಲ. ನಿಲ್ದಾಣದ ಎದುರೇ ಪ್ರಯಾಣಿಕರನ್ನು ಕರೆದೊಯ್ಯುಲಾಗುತ್ತಿದೆ. ಹೊಸ ನಿಲ್ದಾಣದಲ್ಲಿ 75 ಆಟೋರಿಕ್ಷಾ, 130 ಕಾರುಗಳ ಪಿಕ್‌ಅಪ್ ಡ್ರಾಪ್‌ಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಜೊತೆಗೆ ಎರಡು ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌, ಪಿಕ್‌ಅಪ್ ಡ್ರಾಪ್‌ಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಬೇಸ್‌ಮೆಂಟ್‌ಗಳು 1672 ಇಸಿಎಸ್‌ (ಇಕ್ವಲೆಂಟ್‌ ಕಾರ್ ಸ್ಪೇಸ್‌) ಸಾಮರ್ಥ್ಯ ಹೊಂದಿರಲಿದೆ.

ಇನ್ನು 50 ರಿಕ್ಷಾ, 10 ಬಸ್‌, 20 ಕಾರುಗಳು ಪಿಕ್‌ಅಪ್‌ ಡ್ರಾಪ್‌ ಮಾಡಬಹುದಾದಷ್ಟು ಸ್ಥಳಾವಕಾಶ ನಿರ್ಮಿಸಲು ಯೋಜಿಸಲಾಗಿದೆ. ಜೊತೆಗೆ ಓಕಳಿಪುರದ ಎರಡನೇ ಪ್ರವೇಶ ದ್ವಾರದ ಕಟ್ಟಡದ ಬಳಿ ಜಿ+3 ಮಾದರಿಯ ಮಲ್ಟಿಲೇವಲ್‌ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ.

ಎರಡು ಪ್ಲಾಟ್‌ಫಾರ್ಮ್‌/ 3ನೇ ಪ್ರವೇಶ ದ್ವಾರ: ಸದ್ಯ ಮೆಜೆಸ್ಟಿಕ್‌ ನಿಲ್ದಾಣವು 10 ಪ್ಲಾಟ್‌ಫಾರ್ಮ್‌ ಹೊಂದಿದೆ. ಮರು ನಿರ್ಮಾಣದ ವೇಳೆ ಇನ್ನೆರಡು ಪ್ಲಾಟ್‌ಫಾರ್ಮ್‌ ನಿರ್ಮಿಸಲು (11 ಮತ್ತು 12ನೇ) ನಿರ್ಧರಿಸಲಾಗಿದೆ. ಇದರೊಟ್ಟಿಗೆ ಪಿಟ್‌ಲೈನ್‌ಗಳು ಸೇರಿವೆ. ಇದರ ಜೊತೆಗೆ 3ನೇ ಪ್ರವೇಶ ದ್ವಾರವನ್ನು ವಾಟಾಳ್‌ ನಾಗರಾಜ್‌ ರಸ್ತೆಯ (ರೈಲ್ವೆ ಗ್ರೌಂಡ್‌ ರಸ್ತೆ) ಕಡೆಯಿಂದ ಕಲ್ಪಿಸುವುದಾಗಿ ನೀಲನಕ್ಷೆಯಲ್ಲಿ ತೋರ್ಪಡಿಸಲಾಗಿದೆ.

ನಿತ್ಯ 2 ಲಕ್ಷ ಜನ ಪ್ರಯಾಣ

ರೈಲ್ವೆ ಮಂಡಳಿ ಅಂಕಿಅಂಶದ ಪ್ರಕಾರ ರಾಜ್ಯದ ಅತೀ ಜನದಟ್ಟಣೆ ರೈಲ್ವೆ ನಿಲ್ದಾಣ ಇದಾಗಿದೆ. ಹೀಗಾಗಿ ಮಂಡಳಿ ಎನ್‌ಎಸ್‌ಜಿ1 (ನಾನ್‌ ಸಬ್‌ಅರ್ಬನ್‌ ಗ್ರೇಡ್‌) ವಿಭಾಗದಲ್ಲಿ ಕೆಎಸ್‌ಆರ್‌ಅನ್ನು ಸೇರ್ಪಡೆ ಮಾಡಿದೆ. ನಿಲ್ದಾಣವನ್ನು ಪ್ರತಿದಿನ 1.75 ಲಕ್ಷ - 2 ಲಕ್ಷ ಪ್ರಯಾಣಿಕರು ಬಳಸುತ್ತಿದ್ದಾರೆ. ವಾರ್ಷಿಕ 2023-24ರಲ್ಲಿ 2.48 ಕೋಟಿ ಜನ ಬಳಸಿದ್ದು, ₹803 ಕೋಟಿ ಆದಾಯ ಗಳಿಸಿದೆ.

ವಿಮಾನ ನಿಲ್ದಾಣ ಮಾದರಿಯಲ್ಲಿ ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣವು ₹1500 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳ್ಳಲಿದೆ. ಯೋಜನೆ ರೂಪಿಸಿ ರೈಲ್ವೆ ಮಂಡಳಿಗೆ ಕಳಿಸಲಾಗಿದೆ.

-ವಿ.ಸೋಮಣ್ಣ, ರಾಜ್ಯ ರೈಲ್ವೆ ಖಾತೆ ಸಚಿವ

ಆಧುನೀಕರಣ ಕಾಮಗಾರಿ ಸ್ವಾಗತಾರ್ಹ. ಆದರೆ, ಮುಖ್ಯವಾಗಿ ನಿಲ್ದಾಣದ ಟ್ರ್ಯಾಕ್‌ ವ್ಯವಸ್ಥೆಯನ್ನು ನವೀಕರಿಸಿಕೊಳ್ಳಬೇಕು. ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

-ಕೃಷ್ಣಪ್ರಸಾದ್‌, ರೈಲ್ವೆ ಸಾರಿಗೆ ತಜ್ಞ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ