ರಾಜ್ಯದ 9 ಜೈಲು ಮೇಲೆ ಬೆಂಗಳೂರಿಂದಲೇ ನಿಗಾ

KannadaprabhaNewsNetwork |  
Published : Feb 01, 2026, 02:15 AM IST
Prison 7 | Kannada Prabha

ಸಾರಾಂಶ

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಕಾರಾಗೃಹಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕಾರಾಗೃಹ ಸೆಂಟ್ರಲ್‌ ಕಮಾಂಡ್‌ ಸೆಂಟರ್‌ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಕಾರಾಗೃಹಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕಾರಾಗೃಹ ಸೆಂಟ್ರಲ್‌ ಕಮಾಂಡ್‌ ಸೆಂಟರ್‌ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಉದ್ಘಾಟಿಸಿದರು.

ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಮಾಂಡ್ ಸೆಂಟರ್‌ ಜತೆ ಬೆಂಗಳೂರು, ಬೆಂಗಳೂರು ದಕ್ಷಿಣ(ರಾಮನಗರ), ಶಿವಮೊಗ್ಗ, ಮೈಸೂರು, ಮಂಗಳೂರು, ಕಲಬುರಗಿ, ಧಾರವಾಡ, ಬೆಳಗಾವಿ ಮತ್ತು ಬಳ್ಳಾರಿ ಕಾರಾಗೃಹದಲ್ಲಿ ಅಳವಡಿಸಿರುವ ಎಐ ಆಧಾರಿತ 1076 ಸಿಸಿ ಕ್ಯಾಮೆರಾಗಳನ್ನು ಸಂಪರ್ಕ ಕಲ್ಪಿಸಲಾಗಿದೆ. ಕಮಾಂಡ್‌ ಸೆಂಟರ್‌ನಿಂದ ಜೈಲಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತದೆ.

ನೂತನ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಡಾ. ಪರಮೇಶ್ವರ್‌, ಆಡಳಿತದ ದೃಷ್ಟಿಯಿಂದ ಸೆಂಟ್ರಲ್‌ ಕಮಾಂಡ್ ಸೆಂಟರ್ ಸ್ಥಾಪಿಸಿರುವುದು ಉತ್ತಮ ಹೆಜ್ಜೆಯಾಗಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಆಡಳಿತದ ದೃಷ್ಟಿಯಿಂದ ಕಮಾಂಡ್ ಸೆಂಟರ್ ಸ್ಥಾಪಿಸಬೇಕೆಂದು ಶಿಫಾರಸು ಮಾಡಿತ್ತು. ಅದರಂತೆ ಕಮಾಂಡ್‌ ಸೆಂಟರ್‌ ಸ್ಥಾಪಿಸಲಾಗಿದೆ. ಈ ಕ್ರಮದಿಂದ ಜೈಲುಗಳಿಗೆ ಭೇಟಿ ನೀಡುವವರ ವಸ್ತುಗಳ ತಪಾಸಣೆ ನಡೆಸುವುದು, ಸಿಬ್ಬಂದಿ ಕಾರ್ಯ ಚಟುವಟಿಕೆಯನ್ನು ಕಮಾಂಡ್ ಸೆಂಟರ್‌ನಿಂದ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದರು.

2500 ಕೈದಿಗಳ ಬಿಡುಗಡೆ:

ನಿಮ್ಮ ಕಣ್ಣುತಪ್ಪಿ, ಯಾವುದೇ ವಸ್ತುಗಳು ಜೈಲಿನ ಒಳಗೆ ಹೋಗಲು ಸಾಧ್ಯವಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದ ಸಚಿವರು, ಕಾರಾಗೃಹ ಇಲಾಖೆ ಎನ್ನುವುದಕ್ಕಿಂತ ಸುಧಾರಣೆ ಇಲಾಖೆ ಎನ್ನುವುದು ಮುಖ್ಯ. ಮೂರು ಬಾರಿ ಗೃಹ ಸಚಿವನಾದ ಅವಧಿಯಲ್ಲಿ ಸುಮಾರು 2500 ಕೈದಿಗಳನ್ನು ಸುಧಾರಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯು ಬಹಳ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಡಲು ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದು ತಕ್ಷಣದ ಕ್ರಮ ಕೈಗೊಳ್ಳಲಾಗುವುದು. ತಂತ್ರಜ್ಞಾನ ಮತ್ತು ಜನ‌ಸಮುದಾಯವನ್ನು ಉಪಯೋಗಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಅಪರ‌ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ರಾಜ್ಯ ಕಾರಾಗೃಹ ಮತ್ರು ಸುಧಾರಣಾ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಪೊಲೀಸ್ ಉಪಮಹಾನಿರೀಕ್ಷಕ ಜಿನೇಂದ್ರ ಖಣಗಾವಿ, ಪೊಲೀಸ್ ಅಧೀಕ್ಷಕ ಅಂಶು ಕುಮಾರ್ ಉಪಸ್ಥಿತರಿದ್ದರು.

ಬಾಕ್ಸ್....

ಕೈದಿಗಳಿಗೆ ಕೌಶಲ್ಯ ಕೊಟ್ಟು

ಆದಾಯ ತನ್ನಿ: ಡಾ। ಪರಂ

ತೆಲಂಗಾಣ, ಆಂಧ್ರಪ್ರದೇಶ ಸೇರಿ ಬೇರೆ ರಾಜ್ಯದ ಕಾರಾಗೃಹದಲ್ಲಿ ಕೈದಿಗಳಿಗೆ ಕೌಶಲ್ಯವನ್ನು ನೀಡಿ ವಾರ್ಷಿಕವಾಗಿ 300 ಕೋಟಿ ರು. ಆದಾಯ ಗಳಿಸುತ್ತಿದ್ದಾರೆ. ಇದೇ ರೀತಿಯ ಆದಾಯ ನಮ್ಮ ರಾಜ್ಯದ ಕಾರಾಗೃಹದಲ್ಲಿ ಬರಬೇಕು ಎಂದು ನಿರೀಕ್ಷೆ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ