ಬಿಡದಿ ಟೌನ್‌ಶಿಪ್ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆಗೆ ಬರಲಿ ಎಂದು ಖಾಲಿ ಕುರ್ಚಿ ಇಟ್ಟುಕೊಂಡು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಯ್ದು ಕುಳಿತಿದ್ದು ಬರೀ ನಾಟಕ, ಇಂತಹ ವಿಚಾರ ಬೀದಿಯಲ್ಲಿ ಚರ್ಚಿಸಲಾಗುತ್ತಾ ಎಂದು ಸಚಿವರಾದ ಎಂ.ಬಿ. ಪಾಟೀಲ್, ಬೈರತಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು : ಬಿಡದಿ ಟೌನ್‌ಶಿಪ್ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆಗೆ ಬರಲಿ ಎಂದು ಖಾಲಿ ಕುರ್ಚಿ ಇಟ್ಟುಕೊಂಡು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಯ್ದು ಕುಳಿತಿದ್ದು ಬರೀ ನಾಟಕ, ಇಂತಹ ವಿಚಾರ ಬೀದಿಯಲ್ಲಿ ಚರ್ಚಿಸಲಾಗುತ್ತಾ ಎಂದು ಸಚಿವರಾದ ಎಂ.ಬಿ. ಪಾಟೀಲ್, ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಬಿಡದಿ ಟೌನ್‌ಶಿಪ್ ವಿರುದ್ಧ ಕುಮಾರಸ್ವಾಮಿ ಅವರು ಮಾಡುತ್ತಿರುವ ಹೋರಾಟ ಬರೀ ನಾಟಕ. ರೈತರ ಪರವಾದ ಕಾಳಜಿಯಿಂದ ಅಲ್ಲ. ಕಾಳಜಿ ಇದ್ದಿದ್ದರೆ ಮುಖ್ಯಮಂತ್ರಿ ಅವರ ಆಹ್ವಾನದಂತೆ ವಿಧಾನಸೌಧಕ್ಕೆ ಬರಬೇಕಿತ್ತು. ಅದನ್ನು ಬಿಟ್ಟು ಅನತ್ಯವಾಗಿ ಹೋರಾಟ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಹೋರಾಟ, ಚರ್ಚೆಯ ನಾಟಕ ಆಡುತ್ತಿದ್ದಾರೆ
ಬಿಜೆಪಿ, ಜೆಡಿಎಸ್‌ನವರಿಗೆ ರೈತರ ಪರವಾಗಿ ಕಾಳಜಿ ಇದ್ದಿದ್ದರೆ ಕುಮಾರಸ್ವಾಮಿ ಅವರು ಎರಡು ಬಾರಿ, ಯಡಿಯೂರಪ್ಪ ಅವರು 3 ಬಾರಿ, ಬಸರಾಜ ಬೊಮ್ಮಾಯಿ, ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆ ಕೈಬಿಡಬೇಕಿತ್ತು. ಆಗ ಸುಮ್ಮನಿದ್ದು ಈಗ ರಾಜಕೀಯಕ್ಕಾಗಿ ಹೋರಾಟ, ಚರ್ಚೆಯ ನಾಟಕ ಆಡುತ್ತಿದ್ದಾರೆ ಎಂದರು.
ಸರ್ಕಾರದ ಯೋಜನೆ ಬಗ್ಗೆ ಬೀದಿಯಲ್ಲಿ ಚರ್ಚೆ ಮಾಡೋಕೆ ಆಗುತ್ತದಾ?
ಸಾರಿಗೆ ಸಚಿವ ಬೈರತಿ ಸುರೇಶ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಬಗ್ಗೆ ಬೀದಿಯಲ್ಲಿ ಚರ್ಚೆ ಮಾಡೋಕೆ ಆಗುತ್ತದಾ? ಮುಖ್ಯಮಂತ್ರಿ ಅವರು ಗೌರವಯುತವಾಗಿ ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನಿಸಿದ್ದರು. ಆದರೆ, ಕುಮಾರಸ್ವಾಮಿಯವರು ಬಂದಿಲ್ಲ. ಶೇ.80 ರಷ್ಟು ರೈತರು ಈ ಯೋಜನೆ ಪರ ಇದ್ದಾರೆ. ಹೀಗಾಗಿಯೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
