ಕನಕಗಿರಿ: ಒಂದೇ ಕುಟುಂಬದ ೯ ಜನ ಅಸ್ವಸ್ಥರಾದ ಘಟನೆ ತಾಲೂಕಿನ ಕೆ.ಮಲ್ಲಾಪೂರ ಗ್ರಾಮದಲ್ಲಿ ಸೋಮವಾರ ನಡೆದಿದ್ದು ಕಲುಷಿತ ನೀರು ಸೇವೆನೆಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೋಮವಾರ ಸಂಜೆ ಏಕಾಏಕಿ ವಾಂತಿಬೇಧಿ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಗಂಗಾವತಿ ತಾಲೂಕಾಸ್ಪತ್ರೆಗೆ ತೆರಳಿದ್ದಾರೆ. ಮನೆಯ ಆಹಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಅಸ್ವಸ್ಥರಾದವರು ತಮ್ಮ ಕಾಲನಿಗೆ ಕಲುಷಿತ ನೀರು ಸರಬರಾಜು ಆಗಿದ್ದರಿಂದ ಈ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುದಿಯಪ್ಪ, ಲಕ್ಷ್ಮೀದೇವಿ, ದೊಡ್ಡಮ್ಮ, ಪಾರ್ವತಮ್ಮ, ಬಸವರಾಜ, ಹನುಮೇಶಮ್ಮ, ಮಹೇಂದ್ರ, ಮಾರುತಿ, ಅಭಿನವ ಅಸ್ವಸ್ಥಗೊಂಡಿದ್ದಾರೆ.ಪ್ರತ್ಯೇಕ ಸಮಯದಲ್ಲಿ ನೀರು ಸರಬರಾಜು ಮಾಡಲು ಮನವಿ ಮಾಡಿದರೂ ಪಿಡಿಒ ಸ್ಪಂದಿಸಿಲ್ಲ. ಗ್ರಾಮದ ಒಂದೆರೆಡು ಕಡೆಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ತೋರುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಸ್ವಸ್ಥರಾಗಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಬೇಕು ಎಂದು ರೈತ ಮುಖಂಡ ಸೋಮನಾಥ ನಾಯಕ ಆಗ್ರಹಿಸಿದ್ದಾರೆ.