೯೦ ಕೋಟಿ ರು. ವೆಚ್ಚದಲ್ಲಿ ಸಂಪರ್ಕ ನಾಲೆ ಆಧುನೀಕರಣ: ಶಾಸಕ ದರ್ಶನ್

KannadaprabhaNewsNetwork | Published : Jan 29, 2025 1:33 AM

ಸಾರಾಂಶ

ನಾಲೆಯ ಆಧುನೀಕರಣದ ಬಗ್ಗೆ ಈಗಾಗಲೆ ನೋಟಿಫಿಕೇಷನ್ ಹೊರಡಿಸಲಾಗಿದೆ, ಜತೆಗೆ ಕಾವೇರಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿಯೇ ಚರ್ಚಿಸಿ ತೀರ್ಮಾನಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ನಾಲೆಯಲ್ಲಿ ಆರು ತಿಂಗಳು ನೀರು ಹರಿಸಲಾಗುತ್ತದೆ ಅಷ್ಟೇ. ಉಳಿದ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ನಡೆಸಿಕೊಂಡು ಭೂಮಿ ಪೂಜೆ ನೆರವೇರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕನಗನಮರಡಿ-ದೊಡ್ಡಬ್ಯಾಡರಹಳ್ಳಿ ಮುಖಾಂತರ ಶ್ರೀರಂಗಪಟ್ಟಣ, ಬನ್ನೂರು ಭಾಗಕ್ಕೆ ಹಾದುಹೋಗುವ ವಿಶ್ವೇಶ್ವರಯ್ಯ ನಾಲೆಯ ಸಂಪರ್ಕ ನಾಲೆಯನ್ನು ೯೦ ಕೋಟಿ ರು. ವೆಚ್ಚದಲ್ಲಿ ಆಧುನೀಕರಣಗೊಳಿಸುವ ಕಾಮಗಾರಿಗೆ ದೊಡ್ಡಬ್ಯಾಡರಹಳ್ಳಿ ಗ್ರಾಮದ ಬಳಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ವಿಶ್ವೇಶ್ವರಯ್ಯ ನಾಲೆಯ ಸಂಪರ್ಕ ನಾಲೆಯಾದ ಕನಗನಮರಡಿ- ಬನ್ನೂರು ಸಂಪರ್ಕ ನಾಲೆಯೂ ಹಲವಾರು ವರ್ಷಗಳಿಂದ ದುಸ್ಥಿತಿಯಲ್ಲಿತ್ತು. ಹಾಗಾಗಿ ನಾಲೆಯ ಆಧುನೀಕರಣಕ್ಕೆ ೯೦ ಕೋಟಿ ರು.ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ನಾಲೆಯು ೨೭ ಕಿ.ಮೀ. ಇದ್ದು ಪಾಂಡವಪುರ ತಾಲೂಕಿನಲ್ಲಿ ೧೦ ಕಿ.ಮೀ. ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ೧೭ ಕಿ.ಮೀ. ಉದ್ದ ಇರಲಿದೆ. ನಾಲೆ ಆಧುನೀಕರಣದಿಂದ ಈ ಭಾಗದ ೫೩೦೦ ಎಕರೆಗೂ ಅಧಿಕ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿದೆ ಎಂದರು.

ನಾಲೆಯ ಆಧುನೀಕರಣದ ಬಗ್ಗೆ ಈಗಾಗಲೆ ನೋಟಿಫಿಕೇಷನ್ ಹೊರಡಿಸಲಾಗಿದೆ, ಜತೆಗೆ ಕಾವೇರಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿಯೇ ಚರ್ಚಿಸಿ ತೀರ್ಮಾನಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ನಾಲೆಯಲ್ಲಿ ಆರು ತಿಂಗಳು ನೀರು ಹರಿಸಲಾಗುತ್ತದೆ ಅಷ್ಟೇ. ಉಳಿದ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ನಡೆಸಿಕೊಂಡು ಭೂಮಿ ಪೂಜೆ ನೆರವೇರಿಸಲಾಗಿದೆ. ಇದರಿಂದ ಕೆಲವು ರೈತರಿಗೆ ಅನುಕೂಲವೂ ಆಗುತ್ತಿದೆ, ಅನಾನೂಕೂಲವೂ ಆಗುತ್ತಿದೆ. ಆದರೆ, ನಾಲೆ ಆಧುನೀಕರಣಗೊಂಡರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯ ಸರ್ಕಾರದಿಂದ ೧೮೦ ಕೋಟಿ ರು. ವೆಚ್ಚದಲ್ಲಿ ಕಾವೇರಿ ಹಾಗೂ ಹೇಮಾವತಿ ನಾಲೆಗಳ ವಿತರಣಾ ನಾಲೆಗಳ ಆಧುನೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರಿಗೆ ಅನುಕೂಲವಾಗುವಂತೆ ಹೇಗೆ ಕೆಲಸ ಮಾಡಬೇಕು ಎಂಬ ಚಿಂತನೆಯನ್ನೂ ನಡೆಸಲಾಗುತ್ತಿದೆ. ನಾಲೆಗಳು ರೈತರ ಜೀವನಾಡಿ ಆಗಿರುವುದರಿಂದ ಆಧುನೀಕರಣ ಕಾಮಗಾರಿ ನಡೆಸುವಂತಹ ಗುತ್ತಿಗೆದಾರರು ಗುಣಮಟ್ಟದಿಂದ ಕೆಲಸ ಮಾಡಬೇಕು ಎಂದರು.

ರೈತ ಮುಖಂಡರಾದ ಶಿವಣ್ಣೇಗೌಡ, ಬಲರಾಮು, ತಮ್ಮೇಗೌಡ, ಜಗದೀಶ್, ಪ್ರಕಾಶ್, ಡಿ.ಪಿ.ಧರ್ಮರಾಜು, ಶಾಂತಕುಮಾರ್, ಬಸವ, ಕಾಮಗಾರಿಯ ಪ್ರಾಜೆಕ್ಟರ್ ಮೆನೇಜರ್ ವಾಸುದೇವ್, ಮಂಜುನಾಥ್, ಹರ್ಷವರ್ಧನ್ ಸೇರಿದಂತೆ ಹಲವರಿದ್ದರು.

Share this article