ಶಿಕ್ಷಕರ ಕ್ಷೇತ್ರ ಚುನಾವಣೆ: ಕೊಪ್ಪಳ ಜಿಲ್ಲೆಯಲ್ಲಿ ಶೇ. 92.59 ಮತದಾನ

KannadaprabhaNewsNetwork |  
Published : Oct 24, 2026, 02:15 AM IST
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆಯಿತು. | Kannada Prabha

ಸಾರಾಂಶ

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 92.59ರಷ್ಟು ಮತದಾನವಾಗಿದೆ. ಜಿಲ್ಲೆಯ ಏಳು ತಾಲೂಕುಗಳ 20 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟು 2,714 ಮತದಾರರ ಪೈಕಿ 2,513 ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ತಿಳಿಸಿದ್ದಾರೆ.

ಕೊಪ್ಪಳ: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 92.59ರಷ್ಟು ಮತದಾನವಾಗಿದೆ. ಜಿಲ್ಲೆಯ ಏಳು ತಾಲೂಕುಗಳ 20 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು 2,714 ಮತದಾರರ ಪೈಕಿ 2,513 ಮಂದಿ ಹಕ್ಕು ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 1,845 ಪುರುಷರು ಮತ್ತು 869 ಮಹಿಳೆಯರು ಸೇರಿ ಒಟ್ಟು 2,714 ಮತದಾರರಿದ್ದರು. ಇವರಲ್ಲಿ 1,732 ಪುರುಷರು (ಶೇ. 93.88) ಹಾಗೂ 781 ಮಹಿಳೆಯರು (ಶೇ. 89.87) ಮತ ಚಲಾಯಿಸಿದ್ದಾರೆ.

ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. ಬೆಳಗ್ಗೆ 10 ಗಂಟೆಗೆ ಶೇ. 12.42ರಷ್ಟು ಮತದಾನವಾಗಿದ್ದರೆ, ಮಧ್ಯಾಹ್ನ 12 ಗಂಟೆಗೆ ಶೇ. 49.89 ಹಾಗೂ ಮಧ್ಯಾಹ್ನ 2 ಗಂಟೆಗೆ ಶೇ. 78.11ರಷ್ಟು ಮತದಾನ ದಾಖಲಾಗಿತ್ತು. ಅಂತಿಮವಾಗಿ ಶೇ. 92.59ರಷ್ಟು ಮತದಾನವಾಗಿದೆ.

ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಕೊಪ್ಪಳ ತಾಪಂ, ಕುಕನೂರು ಹಾಗೂ ಅಳವಂಡಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.

ಗಂಗಾವತಿ ತಾಲೂಕಿನಲ್ಲಿ ಶೇ. 94.8 ಮತದಾನ: ಕರ್ನಾಟಕ ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಶೇ. 94.08ರಷ್ಟು ಮತದಾನವಾಗಿದೆ.

ಗಂಗಾವತಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಮತದಾನ ಕೇಂದ್ರದಲ್ಲಿ 373 ಮತದಾರು ಮತ ಚಲಾಯಿಸಿದ್ದು, ಅದರಲ್ಲಿ 223 ಪುರುಷ ಮತದಾರರು ಮತ್ತು 150 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಈ ಕೇಂದ್ರದಲ್ಲಿ ಶೇ. 93.95ರಷ್ಟು ಮತದಾನವಾಗಿದೆ.ವೆಂಕಟಗಿರಿ ಗ್ರಾಪಂ ಮತದಾನ ಕೇಂದ್ರದಲ್ಲಿ 86 ಮತದಾರರು ಮತ ಚಲಾಯಿಸಿದ್ದಾರೆ. ಅದರಲ್ಲಿ 60 ಪುರುಷ, 22 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಈ ಕೇಂದ್ರದಲ್ಲಿ ಶೇ. 95.35 ಮತದಾನವಾಗಿದೆ.ಮರಳಿ ಗ್ರಾಪಂ ಮತಕೇಂದ್ರದಲ್ಲಿ 69 ಮತದಾರು ಮತ ಚಲಾಯಿಸಿದ್ದು, 45 ಪುರುಷ, 24 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಈ ಕೇಂದ್ರದಲ್ಲಿ ಶೇ. 93.24ರಷ್ಟು ಮತದಾನವಾಗಿದೆ. ಗಂಗಾವತಿ ತಾಲೂಕಿನಲ್ಲಿ ಒಟ್ಟು 557 ಮತದಾರರಲ್ಲಿ 524 ಮತದಾರರು ಮತ ಚಲಾಯಿಸಿದ್ದು, ಶೇ. 94.8 ಮತದಾನವಾಗಿದೆ.

ಕಾರಟಗಿಯಲ್ಲಿ ಶೇ. 93.17 ಮತದಾನ: ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾರಟಗಿ ತಾಲೂಕಿನಲ್ಲಿ ಶೇ. ೯೩.೧೭ರಷ್ಟು ಮತದಾನವಾಗಿದೆ.ಕಾರಟಗಿ ಮತ್ತು ಸಿದ್ದಾಪುರ ಸೇರಿ ತಾಲೂಕಿನಲ್ಲಿ ಒಟ್ಟು ೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ತಾಲೂಕಿನ ಸಿದ್ದಾಪುರ ಗ್ರಾಪಂ ಕಟ್ಟಡದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎರಡು ಕಡೆ ಶಾಂತಿಯುತವಾಗಿ ಮತದಾನವಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಕಾರಟಗಿಯಲ್ಲಿ ಒಟ್ಟು ೧೪೯ ಮತದಾರರ ಪೈಕಿ ೧೩೮ ಜನರು ಮತ್ತು ಸಿದ್ದಾಪುರದಲ್ಲಿ ಒಟ್ಟು ೫೬ ಮತದಾರರ ಪೈಕಿ ೫೩ ಮತದಾರರು ಮತದಾನ ಮಾಡಿದ್ದಾರೆ.ಒಟ್ಟು ೨೦೫ ಮತದಾರರಲ್ಲಿ ೧೯೧ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಶೇ. ೯೩.೧೭ರಷ್ಟು ಮತದಾನವಾಗಿದೆ.

ಕುಷ್ಟಗಿಯಲ್ಲಿ ಶೇ. 92.73 ಮತದಾನ: ಈಶಾನ್ಯ ಶಿಕ್ಷಕರ ಕ್ಷೇತ್ರದ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಐದು ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ. 92.73 ಮತದಾನ ದಾಖಲಾಗಿದೆ.ತಾಲೂಕಿನ ಐದು ಮತಗಟ್ಟೆಗಳಲ್ಲಿ ಒಟ್ಟು 509 ಶಿಕ್ಷಕ ಮತದಾರರಿದ್ದು, ಈ ಪೈಕಿ 472 ಮಂದಿ ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಿಕ್ಷಕ ಮತದಾರರು ಉತ್ಸಾಹದಿಂದ ಪಾಲ್ಗೊಂಡು, ಮತ ಚಲಾಯಿಸಿದರು.ಐದು ಮತಗಟ್ಟೆಗಳಲ್ಲಿ ಮತದಾನ: ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಕೊಠಡಿ, ಸರ್ವೇ ಕಾರ್ಯಾಲಯದ ಕೊಠಡಿ, ಹನುಮನಾಳದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹನುಮಸಾಗರ ಪಪಂ, ತಾವರಗೇರಾ ಪಪಂ ಕಾರ್ಯಾಲಯದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರಿಂದ ಮತದಾನ ಸುಗಮವಾಗಿ ನಡೆಯಿತು.

ಮತಗಟ್ಟೆ ಹೊರಗೆ ಮತಯಾಚನೆ: ಮತಗಟ್ಟೆಗಳ ಪ್ರವೇಶ ದ್ವಾರಗಳ ಹೊರಭಾಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶಿಕ್ಷಕ ಮತದಾರರಿಗೆ ಕೈಮುಗಿದು ಮತಯಾಚಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಹಾಗೂ ಬಿಜೆಪಿ ಅಭ್ಯರ್ಥಿ ಶಶಿಲ್‌ ನಮೋಶಿ ಪರವಾಗಿ ಕಾರ್ಯಕರ್ತರು ಮತಯಾಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಹಾಗೂ ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

ಚುನಾವಣಾ ಕಾರ್ಯಕ್ಕಾಗಿ ಪ್ರತಿ ಮತಗಟ್ಟೆಗೆ ಐವರಂತೆ ಒಟ್ಟು 25 ಸಿಬ್ಬಂದಿ ಹಾಗೂ ಹೆಚ್ಚುವರಿ ತಂಡದ ಐವರು ಸೇರಿ 30 ಸಿಬ್ಬಂದಿ ನಿಯೋಜಿಸಲಾಗಿತ್ತು. ಸಿಪಿಐ ವಿಶ್ವನಾಥ ಹಿರೇಗೌಡ್ರು ನೇತೃತ್ವದಲ್ಲಿ ಕುಷ್ಟಗಿ ಪಿಎಸ್‌ಐ ಹನುಮಂತಪ್ಪ ತಳವಾರ, ಹನುಮಸಾಗರ ಪಿಎಸ್‌ಐ ಧನಂಜಯ ಹಾಗೂ ತಾವರಗೇರಾ ಪಿಎಸ್‌ಐ ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಮತಗಟ್ಟೆಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲ ತಾಲೂಕಿನಲ್ಲಿ ಶೇ. ೮೦.೨೯ ಮತದಾನ
ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ರೂಪಾಲಿ ನಾಯ್ಕ