ಕಾರಟಗಿ ಪಟ್ಟಣದಲ್ಲಿ ಶುಕ್ರವಾರ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ವಿವಿಧೆಡೆ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಬಸವೇಶ್ವರ ನಗರದಲ್ಲಿ ಕುಂಭಕಳಸ ಹಾಗೂ ಕಿತ್ತೂರು ಚೆನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು.
ಕಾರಟಗಿ: ಪಟ್ಟಣದಲ್ಲಿ ಶುಕ್ರವಾರ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ವಿವಿಧೆಡೆ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಬಸವೇಶ್ವರ ನಗರದಲ್ಲಿ ಕುಂಭಕಳಸ ಹಾಗೂ ಕಿತ್ತೂರು ಚೆನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು. ಬಡಾವಣೆಯ ಬಸವೇಶ್ವರ ದೇವಸ್ಥಾನದಿಂದ ಆರ್.ಜಿ. ರಸ್ತೆಯಲ್ಲಿರುವ ಕಿತ್ತೂರು ಚೆನ್ನಮ್ಮ ವೃತ್ತದ ವರೆಗೆ ನಡೆದ ಮೆರವಣಿಗೆಗೆ ಡೊಳ್ಳು ಕುಣಿತ ಮೆರುಗು ನೀಡಿತು. ಬಳಿಕ ವೃತ್ತದಲ್ಲಿ ಚೆನ್ನಮ್ಮ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಪಂಚಮಸಾಲಿ ಸಮಾಜದ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಮಾಜದವರಿಗೆ ಜಯಂತಿಯ ಶುಭಾಶಯ ಕೋರಿದರು.
ಮಹಿಳೆಯರಿಗೆ ಚೆನ್ನಮ್ಮ ಆದರ್ಶ: ಪುರಸಭೆ ಕಾರ್ಯಾಲಯದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಎತ್ತಿನಮನಿ ಮಾತನಾಡಿ, ರಾಣಿ ಚೆನ್ನಮ್ಮ ಅವರ ಧೈರ್ಯ, ದೇಶಭಕ್ತಿ ಹಾಗೂ ಸ್ವಾತಂತ್ರ್ಯದ ಕಿಚ್ಚು ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ. ಅವರು ಕೇವಲ ಕಿತ್ತೂರಿನ ರಾಣಿಯಲ್ಲ, ದೇಶಪ್ರೇಮ ಮತ್ತು ಸ್ತ್ರೀಶಕ್ತಿಯ ಸಂಕೇತವಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆಯರಲ್ಲಿ ಚೆನ್ನಮ್ಮ ಪ್ರಮುಖ ಸ್ಥಾನ ಪಡೆದಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಮಾತನಾಡಿ, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ನಡೆಸಿದ ಕಿತ್ತೂರು ಚೆನ್ನಮ್ಮ ಅವರ ಧೈರ್ಯ, ಹೋರಾಟ ಹಾಗೂ ಆಡಳಿತ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದರು.
ಇದಕ್ಕೂ ಮುನ್ನ ಪುರಸಭೆ ಕಾರ್ಯಾಲಯದಲ್ಲಿ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಸ್ ನಿಲ್ದಾಣದ ಬಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿಯೂ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ದಾಸೋಹ ಸಮಿತಿ ಅಧ್ಯಕ್ಷ ಚೆನ್ನಬಸಪ್ಪ ಸುಂಕದ್, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ. ಪಾಟೀಲ್, ಪುರಸಭೆ ಸದಸ್ಯರಾದ ಎಚ್. ಈಶಪ್ಪ, ಹಿರೇಬಸಪ್ಪ ಸಜ್ಜನ್, ಬಸವರಾಜ ಕೊಪ್ಪದ, ರಮೇಶ ಅಯೋಧ್ಯ, ಶರಣಪ್ಪ ಶಿವಶಕ್ತಿ, ಬಸನಗೌಡ ಟೆಂಗಿನಕಾಯಿ, ಕೆ. ವಿರೂಪಾಕ್ಷಪ್ಪ, ಶಿವಶರಣೇಗೌಡ ಯರಡೋಣ, ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮೌನೇಶ ದಢೇಸೂಗೂರು, ಬಸವರಾಜ ಶೆಟ್ಟರ್, ಉಮೇಶ ಭಂಗಿ, ಪಂಪನಗೌಡ ಬೂದುಗುಂಪಾ, ಪಾಲಾಕ್ಷಪ್ಪ ಕೆಂಡದ್, ವಿರೂಪಾಕ್ಷ ಗುಂಡೂರು, ಶಿವಶರಣಪ್ಪ ಶಿವಪೂಜಿ, ದೇವರಾಜ ಬೂದಿ, ಬಸವರಾಜ ಎತ್ತಿನಮನಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.