ರಾಮನಗರ ಜಿಲ್ಲೆಯಲ್ಲಿ ಶೇ.95.77 ಮತದಾನ

KannadaprabhaNewsNetwork | Published : Feb 17, 2024 1:17 AM

ಸಾರಾಂಶ

ರಾಮನಗರ: ಮಾತಿನ ಚಕಮಕಿಯಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶುಕ್ರವಾರ ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.95.77 ಮತದಾನವಾಗಿದೆ.

ರಾಮನಗರ:

ಮಾತಿನ ಚಕಮಕಿಯಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶುಕ್ರವಾರ ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.95.77 ಮತದಾನವಾಗಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಯವರೆಗೂ ನಡೆಯಿತು. ಬೆಳಗ್ಗಿನಿಂದಲೇ ಶಿಕ್ಷಕರು ಮತ ಕೇಂದ್ರಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಫೆ.20ರಂದು ಮತ ಏಣಿಕೆ ಕಾರ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಜಿಲ್ಲೆಯಲ್ಲಿ 1,456 ಪುರುಷ ಹಾಗೂ 1087 ಮಹಿಳಾ ಮತದಾರರು ಸೇರಿ ಒಟ್ಟು 2543 ಮತದಾರರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಪುರುಷರು - 1388, ಮಹಿಳೆಯರು 1037 ಸೇರಿ ಒಟ್ಟು 2425 (ಶೇ.95.77) ಮಂದಿ ಮತದಾನ ಮಾಡಿದ್ದಾರೆ.

ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನಲ್ಲಿ ತಲಾ ಎರಡು ಮತಗಟ್ಟೆ, ಹಾರೋಹಳ್ಳಿ ತಾಲೂಕಿನಲ್ಲಿ ಒಂದು ಮತಗಟ್ಟೆ ತೆರೆಯಲಾಗಿತ್ತು. ಆರಂಭದಿಂದಲೂ ಶಿಕ್ಷಕರು ಸರದಿಯಲ್ಲಿ ನಿಂತು ಮತದಾನ ಮಾಡಿದರು.

ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಬಿರುಸಿನಿಂದಲೇ ಆರಂಭ ಕಂಡಿತು. ಮೊದಲ ಎರಡು ಗಂಟೆಯಲ್ಲಿ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಒಟ್ಟು 413 ಮಂದಿ ಮತದಾನ ಮಾಡಿದ್ದರು. ಇದಾದ ನಂತರ ಎರಡನೇ ಅವಧಿಯಲ್ಲಿ 1077 ಮಂದಿ ಮತಚಲಾಯಿಸುವ ಮೂಲಕ ಮಧ್ಯಾಹ್ನ 12ಗಂಟೆಗೆ ಶೇ.42.54ರಷ್ಟು ಮತದಾನವಾಗಿತ್ತು. ಊಟದ ಬಳಿಕ ಶಿಕ್ಷಕರು ಮತಗಟ್ಟೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತದಾನ ಪ್ರಕ್ರಿಯೆ ಮುಗಿಯುವ ಒಂದು ಗಂಟೆಯಲ್ಲಿ ಹೆಚ್ಚಿನ ಶಿಕ್ಷಕರು ಮತದಾನ ಮಾಡಿದರು.

ಜಿಲ್ಲಾಧಿಕಾರಿಗಳ ಭೇಟಿ:

ಇನ್ನು ಮತದಾನ ಪ್ರಾರಂಭವಾಗುತ್ತಿದ್ದಂತೆ ಎಲ್ಲಾ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರನ್ ಭೇಟಿ ನೀಡಿ ವೀಕ್ಷಿಸಿದರು. ಇಡೀ ದಿನ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಜಿಲ್ಲೆಯ ಮತ ಕೇಂದ್ರಗಳ ಬಳಿ ಕಂಡು ಬಂದಿಲ್ಲ. ಇವರ ಬದಲಿಗೆ ಅಭ್ಯರ್ಥಿಗಳ ಬೆಂಬಲಿಗರು ಮತಯಾಚನೆ ಮಾಡಿದರು. ಮತ ಕೇಂದ್ರದ 100 ಮೀ ಹಂತರದಲ್ಲಿ ಪೆಂಡಲ್ ಹಾಕಿ ಬೆಂಬಲಿಗರು ತಮ್ಮ ಅಭ್ಯರ್ಥಿ ಪರ ಕೊನೆ ಕ್ಷಣದ ಕಸರತ್ತು ಮಾಡಿದರು.

ರಾಮನಗರದ ಮಿನಿ ವಿಧಾನಸೌಧದ ಸಮೀಪ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಮುಖಂಡರಾದ ಗಾಣಕಲ್ ನಟರಾಜು, ಆರ್.ಕೆ.ಭೈರಲಿಂಗಯ್ಯ, ಸೇರಿ ಹಲವರು ಮತಯಾಚನೆ ಮಾಡಿದರು. ಇನ್ನು ಮೈತ್ರಿ ಅಭ್ಯರ್ಥಿ ಎ.ಸಿ.ರಂಗನಾಥ್ ಪರ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರಾದ ರಾಜಶೇಖರ್, ಮಂಜುನಾಥ್, ಎಸ್.ಆರ್.ನಾಗರಾಜು ಸೇರಿ ಮುಖಂಡರು ಮತಯಾಚನೆ ಮಾಡಿದರು. ಇದೇ ಮಾದರಿಯಲ್ಲಿ ಜಿಲ್ಲೆಯ ವಿವಿಧೆಡೆ ಸ್ಥಾಪನೆಯಾದ ಮತಗಟ್ಟೆಗಳ ಬಳಿ ಕಾರ್ಯಕರ್ತರು ಹಾಗೂ ಮುಖಂಡರು ಮತಯಾಚಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಆರೋಪ :

ಮಾಗಡಿ ತಾಲೂಕಿನ ಕುದೂರಿನಲ್ಲಿ ಶಾಲಾ ಆವರಣದಲ್ಲಿ ಮಾಜಿ ಶಾಸಕ ಎ ಮಂಜುನಾಥ್ ಹಾಗೂ ಅಭ್ಯರ್ಥಿ ರಂಗನಾಥ್ ಭಾವಚಿತ್ರ ಇರುವ ಬ್ಯಾನರ್ ತೆರವುಗೊಳಿಸಿಲ್ಲ ಎಂಬುದಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಬಗ್ಗೆ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕುದೂರಿನ ಕಾಂಗ್ರೆಸ್ ಮುಖಂಡರ ಆರೋಪವಾಗಿದೆ.

ಬಿಗಿ ಬಂದೋಬಸ್ತ್ :

ಯಾವುದೇ ಅಹಿತಕರ ಘಟನೆ ಜರುಗದಂತೆ ಹಾಗೂ ಗಲಾಟೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮತಕೇಂದ್ರದ ಸುತ್ತ ಬಿಗಿ ಭದ್ರತೆ ನೀಡಿತ್ತು.

----------------------

16ಕೆಆರ್ ಎಂಎನ್ 6.ಜೆಪಿಜಿ

ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಮತದಾನ ಮಾಡಲು ಶಿಕ್ಷಕರು ಸಾಲಾಗಿ ನಿಂತಿರುವುದು.

Share this article