ಮಾನವ ಹಕ್ಕುಗಳ ಆಯೋಗದಲ್ಲಿ 9600 ಪ್ರಕರಣ ಇತ್ಯರ್ಥ

KannadaprabhaNewsNetwork | Published : Apr 5, 2025 12:49 AM

ಸಾರಾಂಶ

ಆಯೋಗಕ್ಕೆ ಹೆಚ್ಚಿನ ಸೌಕರ್ಯ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ದೂರುಗಳನ್ನು ಆನ್‌ಲೈನ್ ಅಥವಾ ಅಂಚೆ ಮೂಲಕವೂ ಸಲ್ಲಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬಾಕಿ ಉಳಿದಿದ್ದ ಹಾಗೂ ನಾನು ಅಧ್ಯಕ್ಷನಾದ ಮೇಲೆ ದಾಖಲಾದ ಪ್ರಕರಣಗಳೂ ಸೇರಿದಂತೆ ಒಟ್ಟು 12,400 ಪ್ರಕರಣಗಳ ಪೈಕಿ, 9,600 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 2800 ಪ್ರಕರಣಗಳು ವಿವಿಧ ಹಂತದಲ್ಲಿ ಬಾಕಿ ಇವೆ ಎಂದು ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆಯೋಗದಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು ಆಯೋಗವೇ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಈಗಾಗಲೇ 19 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಜಿಲ್ಲಾ ಹಂತದಲ್ಲಿಯೇ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯ ಮಾಡಲಾಗುತ್ತಿದೆ ಎಂದರು.ಆಯೋಗಕ್ಕೆ ಹೆಚ್ಚಿನ ಸೌಕರ್ಯ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ದೂರುಗಳನ್ನು ಆನ್‌ಲೈನ್ ಅಥವಾ ಅಂಚೆ ಮೂಲಕವೂ ಸಲ್ಲಿಸಬಹುದಾಗಿದೆ. ದೂರುದಾರರು ಇಲ್ಲದಿದ್ದರೂ ಅವರ ಪರವಾಗಿ ಬೇರೆ ಯಾರಾದರೂ ದೂರು ನೀಡಬಹುದು. ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ 45 ಪ್ರಕರಣಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದು, 16 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 29 ಪ್ರಕರಣಗಳು ಬಾಕಿ ಇವೆ ಎಂದು ಅವರು ತಿಳಿಸಿದರು.

ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಮಾತನಾಡಿ, ಆಯೋಗದಿಂದ ಮಾನವ ಹಕ್ಕುಗಳ ಉಲ್ಲಂಘನೆ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಆಯೋಗದ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಮತ್ತಿತರರು ಇದ್ದರು.

-------ಆಯೋಗದ ಹೆಸರಿಟ್ಟುಕೊಂಡವರ ವಿರುದ್ಧ ಕಾನೂನು ಕ್ರಮ ರಾಮನಗರ:ಮಾನವ ಹಕ್ಕುಗಳ ಆಯೋಗದ ಹೆಸರನ್ನು ಹೋಲುವಂತೆ ಹೆಸರನ್ನಿಟ್ಟುಕೊಂಡಿರುವ ಸಂಘ‌ ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಆಯೋಗದ ಹೆಸರಿನಲ್ಲಿ ಹೆದರಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಶ್ಯಾಮ್ ಭಟ್ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾ‌ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ, ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ದೂರುಗಳ‌ ವಿಚಾರಣೆ ಕುರಿತು ನಡದೆ ಸಭೆಯಲ್ಲಿ ಅವರು ಮಾತನಾಡಿದರು.ಕೆಲವರು ಆಯೋಗದ ಹೆಸರಿನ ನಾಮಫಲಕವನ್ನು ವಾಹನಗಳ ಮುಂಭಾಗ ಅಳವಡಿಸಿಕೊಂಡು ತಿರುಗಾಡುತ್ತಿದ್ದಾರೆ. ಅದರ ಪದಾಧಿಕಾರಿಗಳು ಕಚೇರಿಗಳಿಗೆ ಹೋಗಿ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಜಿಲ್ಲೆಯ ಅಧಿಕಾರಿಗಳು ಅಂತಹ ವ್ಯಕ್ತಿಗಳಿಗೆ ಯಾವುದೇ ಪ್ರೋತ್ಸಾಹ ನೀಡಬೇಡಿ ನಿಮ್ಮನ್ನು ಹೆದರಿಸುವ ವ್ಯಕ್ತಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಅಥವಾ ಆಯೋಗಕ್ಕೆ ಮನವಿ ಸಲ್ಲಿಸಿ. ಇದನ್ನು ಗಂಬೀರವಾಗಿ ಪರಿಗಣಿಸಿದ್ದು ಅಂತವರ ವಿರುದ್ಧ ಕಾನೂನು ಕ್ರಮ ವಹಿಸಲು ಪೋಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದರು....ಕೋಟ್ ...

ಮಹಿಳಾ ಹಾಸ್ಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಡ್ರೆಸ್ಸಿಂಗ್ ರೂಮ್‌ಗಳನ್ನು ತೆರೆಯುವ ಅವಶ್ಯಕತೆಯಿದೆ. ಹೊಸ ಹೊಸ ಕಟ್ಟಡ ಪ್ರಸ್ತಾವನೆಯಿರುವೆಡೆ ಕಟ್ಟಡ ಕ್ರಿಯಾ ಯೋಜನೆಯಲ್ಲಿಯೇ ಜಿಪಂ ಸಿಇಓ ಅವರು ಡ್ರೆಸ್ಸಿಂಗ್ ಕೊಠಡಿಗೆ ಆದ್ಯತೆ ನೀಡಬೇಕು.- ಶ್ಯಾಮ್ ಭಟ್, ಅಧ್ಯಕ್ಷರು, ರಾಜ್ಯ ಮಾನವ ಹಕ್ಕುಗಳ ಆಯೋಗ-------4ಕೆಆರ್ ಎಂಎನ್ 5.ಜೆಪಿಜಿರಾಮನಗರ ಜಿಪಂ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಸಾರ್ವಜನಿಕರಿಂದ ಅಹವಾಲು ಆಲಿಸಿದರು.----------

Share this article