ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಸಂಗೀತ, ಕ್ರೀಡೆ ಮುಖ್ಯ

KannadaprabhaNewsNetwork | Published : Apr 5, 2025 12:49 AM

ಸಾರಾಂಶ

ಎರಡು ದಿನಗಳ ಕಾಲ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕಲ್ಪೋತ್ಸವ-2025 ಸಮಾರಂಭವು ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಕೆಐಟಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನೋಡಿದರೂ ಎತ್ತ ಕಣ್ಣಾಯಿಸಿದರೂ ಸೀರೆ, ಪಂಚೆಗಳದ್ದೇ ಕಲರವ. ವಿದ್ಯಾರ್ಥಿನಿಯರು ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ರೇಷ್ಮೆ, ಫ್ಯಾನ್ಸಿ ಸೀರೆಗಳನ್ನುಟ್ಟು ಚಿತ್ರ ನಟಿಯರಂತೆ ಅಲಂಕಾರ ಮಾಡಿಕೊಂಡು ವಿಹರಿಸುತ್ತಿದ್ದರೆ, ಹುಡುಗರು ನಾವೇನೂ ಕಮ್ಮಿ ಇಲ್ಲ ಎಂಬಂತೆ ಜರಿ ಪಂಚೆ, ಜುಬ್ಬ ಶಲ್ಯ ಹಾಕಿಕೊಂಡು ಯಜಮಾನರಂತೆ ಫೋಸ್‌ಕೊಡುತ್ತಿದ್ದ ದೃಶ್ಯ ನಮ್ಮ ಸಂಪ್ರದಾಯ ಸೊಗಡನ್ನು ಬಿಂಬಿಸುವಂತಿತ್ತು. ಇದು ಕಂಡುಬಂದಿದ್ದು ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕಲ್ಪೋತ್ಸವ ಸಮಾರಂಭದಲ್ಲಿ.

ಎರಡು ದಿನಗಳ ಕಾಲ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕಲ್ಪೋತ್ಸವ-2025 ಸಮಾರಂಭವು ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಸಿದೆ. ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಕಲ್ಪೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಶಿಕ್ಷಣದ ಜೊತೆಗೆ ಕಲ್ಪೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಖುಷಿಯಿಂದ ಭಾಗವಹಿಸಿರುವುದು ನಿಜಕ್ಕೂ ಸಂತೋಷ ತಂದಿದೆ. ವಿದ್ಯೆಯ ಜೊತೆಗೆ ಸಾಂಸ್ಕೃತಿಕ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ಆಸಕ್ತಿಯುತ ಕ್ಷೇತ್ರದಲ್ಲಿ ತಮ್ಮನ್ನು ಓರೆಹಚ್ಚಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದ್ದು ಇಡೀ ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣವಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಯ ಕ್ಷಣ ಜೀವನಪರ್ಯಂತ ನೆನಪಿನಲ್ಲಿ ಉಳಿಯಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಒತ್ತು ನೀಡುವ ಮೂಲಕ ಉತ್ತಮ ಅಂಕಗಳನ್ನು ಪಡೆದು ಸಂಸ್ಥೆಗೆ ಮತ್ತು ತಂದೆ-ತಾಯಿಗೆ ಕೀರ್ತಿ ತರಬೇಕೆಂದು ಹಾರೈಸಿದರು. ಕೆವಿಎಸ್ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ ಶಿಸ್ತು, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ತಂದೆ ತಾಯಿಗಳ ಕಷ್ಟವನ್ನು ಅರ್ಥಮಾಡಿಕೊಂಡು ನಿಮ್ಮ ಗುರಿಯನ್ನು ಸಾಧಿಸಬೇಕು. ಸಂಸ್ಥೆಯು ನಿಮಗೆ ಬೇಕಾದ ಎಲ್ಲಾ ರೀತಿಯ ಶೈಕ್ಷಣಿಕವಾಗಿ ಸೌಲಭ್ಯವನ್ನು ಒದಗಿಸುತ್ತಿದ್ದು ಸದುಪಯೋಗಪಡಿಸಿಕೊಂಡು ಪೋಷಕರಿಗೆ ಹಾಗೂ ಸಂಸ್ಥೆಗೆ ಉತ್ತಮ ಹೆಸರು ತಂದುಕೊಡಬೇಕೆಂದರು. ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗುರಿ ಇಲ್ಲದಿದ್ದರೆ ಸಾಧನೆ ಅಸಾಧ್ಯ. ಆಯ್ಕೆ ಮಾಡಿಕೊಂಡ ಗುರಿಯನ್ನು ಸಾಧಿಸುತ್ತೇನೆಂಬ ಹಠ ಮತ್ತು ಛಲ ಇದ್ದರೆ ಏನೇ ತೊಡಕುಗಳು ಬಂದರೂ ಸಾಧನೆ ಮಾಡಬಹುದು. ನಿಮ್ಮ ಜೀವನ ಸಿಹಿ ಹಾಗೂ ಸುಂ ದರವಾಗಿರಲಿ ಸಾಧನೆ ಮಾಡಿ ಸಮಾಜಕ್ಕೆ, ದೇಶಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಿ ಎಂದರು. ಉಪಾಧ್ಯಕ್ಷರಾದ ಟಿ.ಎಸ್. ಬಸವರಾಜು ಹಾಗೂ ಕಾರ್ಯದರ್ಶಿ ಎಂ.ಆರ್. ಸಂಗಮೇಶ್ ಹಾಗೂ ಕೆಐಟಿ ಪ್ರಾಂಶುಪಾಲ ಡಾ. ಜಿ.ಡಿ. ಗುರುಮೂರ್ತಿ ಮಾತನಾಡಿ, ಪೋಷಕರು ನಿಮ್ಮನ್ನು ನಂಬಿ ಕಾಲೇಜಿಗೆ ಕಳುಹಿಸುತ್ತಿದ್ದು ಆ ನಂಬಿಕೆಯನ್ನು ನೀವು ಉಳಿಸಿಕೊಂಡು ಹೋಗಬೇಕು. ಜೀವನದಲ್ಲಿ ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸುತ್ತಾ ಪೋಷಕರ ಆಸೆಯನ್ನು ಈಡೇರಿಸುಬೇಕೆಂದರು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಸಂತೋಷ, ಸಂಭ್ರಮದಿಂದ ಭಾಗವಹಿಸಿರುವುದು ಖುಷಿ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕೆವಿಎಸ್ ಉಪಾಧ್ಯಕ್ಷರಾದ ಬಿ.ಎಸ್. ಉಮೇಶ್, ಜಿ.ಪಿ. ದೀಪಕ್, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಚ್.ಜಿ. ಸುಧಾಕರ್, ಟಿ.ಯು. ಜಗದೀಶಮೂರ್ತಿ, ಸೇರಿದಂತೆ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಸಾಂಸ್ಕೃತಿಕ, ಕ್ರೀಡೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಪದಕ ನೀಡಲಾಯಿತು.

Share this article