ಕನಡಪ್ರಭ ವಾರ್ತೆ ಮಂಗಳೂರು
ನವ ಮಂಗಳೂರು ಬಂದರಿಗೆ ಹೊಸ ವರ್ಷದ ಪ್ರಥಮ ಹಾಗೂ ಈ ಋತುಮಾನದ 4ನೇ ವಿಲಾಸಿ ಹಡಗು ಬುಧವಾರ ಆಗಮಿಸಿತ್ತು.ಮಾರ್ಷಲ್ ಐಲ್ಯಾಂಡ್ಸ್‌ನ ವೈಭವಯುತವಾದ ಎಂ.ಎಸ್. ರಿವೇರಿಯಾ ಹೆಸರಿನ ಈ ವಿಲಾಸಿ ಹಡಗು 752 ಸಿಬ್ಬಂದಿ ಜತೆಗೆ 980 ವಿದೇಶಿ ಪ್ರಯಾಣಿಕರನ್ನು ಬೆಳಗ್ಗೆ ಸುಮಾರು 7 ಗಂಟೆಗೆ ಬಂದರಿಗೆ ಕರೆತಂದಿತ್ತು. ದುಬೈ, ಮುಂಬೈ ಮತ್ತು ಮೊರ್ಮುಗೋವಾ ಬಂದರು ಮೂಲಕ ಮಂಗಳೂರಿಗೆ ಆಗಮಿಸಿದೆ. ಹಡಗಿನ ಒಟ್ಟಾರೆ ಉದ್ದ 239 ಮೀ. ಆಗಿದ್ದು, 66,172 ಟನ್ ಭಾರ ಸಾಗಿಸುವ ಸಾಮರ್ಥ್ಯ ಹೊಂದಿದೆ.ಪ್ರಯಾಣಿಕರಿಗೆ ಬ್ಯಾಂಡ್ ಮಾಧುರ್ಯ ಮತ್ತು ಯಕ್ಷಗಾನ ಕಲಾವಿದರ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು. ಕ್ರೂಸ್ ಲಾಂಜ್‌ನಲ್ಲಿ ವಿವಿಧ ಸಾಂಸ್ಕೃತಿಕ ಆಕರ್ಷಣೆಗಳನ್ನು ಪ್ರವಾಸಿಗರು ವೀಕ್ಷಿಸಿದರು.ಪ್ರವಾಸಿಗರಿಗೆ ವೈದ್ಯಕೀಯ ತಪಾಸಣೆ, ಕಸ್ಟಮ್ಸ್ ಕೌಂಟರ್‌ಗಳು, ಮಂಗಳೂರು ನಗರದ ಸುತ್ತಮುತ್ತ ಸಂಚರಿಸಲು ಸಾರಿಗೆ ಬಸ್‌ಗಳು ಮತ್ತು ವಿಶೇಷ ಟ್ಯಾಕ್ಸಿಗಳು, ಆಯುಷ್ ಸಚಿವಾಲಯದ ಧ್ಯಾನ ಕೇಂದ್ರ, ವರ್ಚುವಲ್ ರಿಯಾಲಿಟಿ ಅನುಭವ ವಲಯ, ಉಚಿತ ವೈಫೈ ಸೇರಿದಂತೆ ಅನೇಕ ಸಿದ್ಧತೆಗಳನ್ನು ಮಾಡಲಾಗಿತ್ತು. ಎನ್‌ಎಂಪಿಎ ಮತ್ತು ಪ್ರವಾಸೋದ್ಯಮ ಸಚಿವಾಲಯದಿಂದ ಮಂಗಳೂರಿನ ಯಕ್ಷಗಾನ ಕಲಾ ಪ್ರಕಾರವನ್ನು ಬಿಂಬಿಸುವ ಸೆಲ್ಫಿ ಸ್ಟ್ಯಾಂಡ್ ಅಳವಡಿಸಲಾಗಿತ್ತು.ಎನ್‌ಎಂಪಿಎ ಉಪಾಧ್ಯಕ್ಷ ಕೆ.ಜಿ. ನಾಥ್ ಅವರು ಇತರ ಅಧಿಕಾರಿಗಳೊಂದಿಗೆ ಅತಿಥಿ ಸತ್ಕಾರದ ಸೂಚಕವಾಗಿ ಹಡಗಿನ ಮಾಸ್ಟರ್ ಅವರನ್ನು ಸನ್ಮಾನಿಸಿದರು. ನಂತರ ಸ್ಥಳೀಯ ತಂಡದಿಂದ ಯಕ್ಷಗಾನ ಪ್ರದರ್ಶನ ನೀಡಿ ಪ್ರವಾಸಿಗರನ್ನು ರಂಜಿಸಲಾಯಿತು. ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮುಂತಾದ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು. ಮಂಗಳೂರಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಮರಣಿಕೆಗಳನ್ನು ಅವರಿಗೆ ನೀಡಲಾಯಿತು. ಬಳಿಕ ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ತೆರಳಿತು.