ಪ್ರಜಾಸೇವಾ ಆಂದೋಲನ ಸಭೆಯಲ್ಲಿ 99,142 ಅರ್ಜಿಗಳ ವಿಲೇವಾರಿ, ಶೇ. 91 ಪ್ರಗತಿ: ಲಕ್ಷ್ಮಣ ಸವದಿ

KannadaprabhaNewsNetwork |  
Published : Nov 08, 2026, 02:00 AM IST
ಪ್ರಜಾಸೇವಾ ಆಂದೋಲನ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆಯ ಮೂಲಕ ಇದುವರೆಗೂ ಸ್ವೀಕರಿಸಲಾದ ಒಟ್ಟು 4,879 ಅರ್ಜಿಗಳಲ್ಲಿ 4,694 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಶೇ. 96ರಷ್ಟು ಪ್ರಗತಿ ಸಾಧಿಸಲಾಗಿದೆ.

ಶಿರಸಿ: ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಪ್ರಜಾಸೇವಾ ಆಂದೋಲನ ಸಭೆಯ ಮೂಲಕ ರಾಜ್ಯಾದ್ಯಂತ ಈವರೆಗೆ ಸ್ವೀಕರಿಸಲಾದ 1,08,057 ಅರ್ಜಿಗಳ ಪೈಕಿ 99,142 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಶೇ. 91ರಷ್ಟು ಪ್ರಗತಿ ದಾಖಲಿಸಲಾಗಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅವರು ಶನಿವಾರ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ನಿಜವಾದ ಮಾಲೀಕರಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವರ ಸೇವಕರಾಗಿ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಅವರ ಕನಸಿನ ಕಾರ್ಯಕ್ರಮವಾದ ಪ್ರಜಾ ಸೇವಾ ಆಂದೋಲನ ಸಭೆಯನ್ನು ರಾಜ್ಯಾದ್ಯಂತ ಪ್ರತಿ ಶನಿವಾರ ನಡೆಸಲಾಗುತ್ತಿದ್ದು, ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆಯ ಮೂಲಕ ಇದುವರೆಗೂ ಸ್ವೀಕರಿಸಲಾದ ಒಟ್ಟು 4,879 ಅರ್ಜಿಗಳಲ್ಲಿ 4,694 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಶೇ. 96ರಷ್ಟು ಪ್ರಗತಿ ಸಾಧಿಸಲಾಗಿದ್ದು, ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಗರಿಷ್ಠ 15 ದಿನಗಳಲ್ಲಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಸಾಲಿನ ಸುಮಾರು 22,675 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಪಾಲು ಸೇರಿದಂತೆ ಒಟ್ಟು ₹62 ಕೋಟಿ ವಿಮೆ ವಿತರಣೆಗೆ ಪ್ರಸ್ತುತ ಚಾಲನೆ ನೀಡಲಾಗಿದೆ. ರೈತರಿಗೆ ಈ ವಿಮೆಯ ಮೊತ್ತವನ್ನು ಸಮರ್ಪಕವಾಗಿ ತಲುಪಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.

ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಒಂದು ವಾರದಿಂದ 10 ದಿನಗಳ ಒಳಗೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಗರಿಷ್ಠ 15 ದಿನಗಳೊಳಗೆ ಪರಿಹಾರ ಒದಗಿಸಬೇಕು. ಪರಿಹಾರ ನೀಡಲು ಸಾಧ್ಯವಾಗದಿದ್ದಲ್ಲಿ ಅರ್ಜಿದಾರರಿಗೆ ಸ್ಪಷ್ಟ ಹಾಗೂ ನಿಖರವಾದ ಉತ್ತರ ನೀಡಬೇಕು ಎಂದರು.

ಶಿರಸಿ- ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಪ್ರಜಾಸೇವಾ ಆಂದೋಲನ ಸಭೆ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳು, ಗ್ರಾಮೀಣ ಬದುಕಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್, ಶಾಲೆ- ಕಾಲೇಜು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಕೃಷಿ ಮತ್ತು ತೋಟಗಾರಿಕೆಗೆ ಅಗತ್ಯ ಸೌಲಭ್ಯಗಳಿಂದ ವಂಚಿತರಾದವರಿಗೆ ಒಂದೇ ಸೂರಿನಡಿ ಪರಿಹಾರ ಕಲ್ಪಿಸಲಾಗುವುದು ಎಂದರು.

ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ರಥ ಸಾಗುವ ರಸ್ತೆಯಲ್ಲಿನ ವಿದ್ಯುತ್ ಲೈನ್‌ಗಳ ಸಮಸ್ಯೆ ನಿವಾರಣೆಗೆ ₹3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿಪೂಜೆ ನೆರವೇರಿಸಿದ್ದಾರೆ ಎಂದರು.ನಂತರ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್ ಅವರು, ಅತಿಕ್ರಮಣದಾರರಿಗೆ ಮನೆ ನಂಬರ್ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಫಲಾನುಭವಿಗಳು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸಬೇಕು ಸಾರ್ವಜನಿಕರ ಪರವಾಗಿ ಸಚಿವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸುಮಾ ಉಗ್ರಣಕಾರ್, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರ ಜಗದೀಶ್, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ. ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಕಾರವಾರ ಉಪವಿಭಾಗಾಧಿಕಾರಿ ರಮ್ಯಾ, ಶಿರಸಿ ಉಪವಿಭಾಗಾಧಿಕಾರಿ ಚಂದ್ರಶೇಖರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ