ಇಂದು ಶಿಕಾರಿಪುರದಲ್ಲಿ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ವಿದ್ಯಾರ್ಥಿಗಳಲ್ಲಿ ಸಾಹಿತ್ಯಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಮ್ಮೇಳನಗಳು ಪರಿಣಾಮಕಾರಿಯಾಗಿದ್ದು, ಶಿಕಾರಿಪುರದಲ್ಲಿ ಜ.4ರಂದು ತಾಲೂಕುಮಟ್ಟದ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಾದ್ಯಕ್ಷರಾಗಿ ಬಹುಮುಖ ಪ್ರತಿಭೆ ಕು.ಹೇಮಾ ಬಣಕಾರ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್ ಹುಚ್ರಾಯಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಜ.4ರಂದು ತಾಲೂಕುಮಟ್ಟದ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಮ್ಮೇಳನಾದ್ಯಕ್ಷರಾಗಿ ಬಹುಮುಖ ಪ್ರತಿಭೆ ಕು.ಹೇಮಾ ಬಣಕಾರ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್ ಹುಚ್ರಾಯಪ್ಪ ಹೇಳಿದರು.

ಮಂಗಳವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಮಕ್ಕಳ ಸುಪ್ತ ಪ್ರತಿಭೆ ಅನಾವರಣ ಅಸಾಧ್ಯ. ಮಕ್ಕಳಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾಳಜಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆಸುವ ನಿಟ್ಟಿನಲ್ಲಿ 8 ವರ್ಷದಿಂದ ಸತತವಾಗಿ ಮಕ್ಕಳ ಸಮ್ಮೇಳನ ನಡೆಸಲಾಗುತ್ತಿದೆ. ಆ ಮೂಲಕ ಹಲವು ಹೊಸ ಪ್ರತಿಭೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಹೆಗ್ಗಳಿಕೆಯನ್ನು ವೇದಿಕೆ ಹೊಂದಿದೆ ಎಂದು ತಿಳಿಸಿದರು.

ಸಮ್ಮೇಳನವನ್ನು ನಿಕಪೂರ್ವ ಅಧ್ಯಕ್ಷೆ ಕು.ಖುಷಿ ಉದ್ಘಾಟಿಸಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಹಾಫೀಜ್ ಕರ್ನಾಟಕಿ, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಹಸೀಲ್ದಾರ್ ಮಲ್ಲೇಶ್ ಪೂಜಾರ್, ಬಿಇಒ ಶಶಿಧರ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ರಾಮಯ್ಯ, ಕಸಾಪ ಅಧ್ಯಕ್ಷ ರಘು, ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಬಿ.ಎಲ್. ರಾಜು ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಸ್ವರಚಿತ ಕವನ ವಾಚನ ಗೋಷ್ಠಿ, ಕಥೆ ವಾಚನ ಗೋಷ್ಠಿ, ಪ್ರಬಂಧ ವಾಚನ ಗೋಷ್ಠಿ, ಚುಟುಕು ವಾಚನ ಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪಾಪಯ್ಯ ಮಾತನಾಡಿ, ಪರಭಾಷೆ ಹಾವಳಿಯಲ್ಲಿ ಕನ್ನಡ ಭಾಷೆ ಅಸ್ಥಿತ್ವಕ್ಕೆ ಧಕ್ಕೆ ಆಗುವ ಆತಂಕ ಕಾಡುತ್ತಿದೆ. ದಿಸೆಯಲ್ಲಿ ಮಕ್ಕಳ ಮೂಲಕ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಮಕ್ಕಳ ಸಮ್ಮೇಳನ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಈ ಬಾರಿಯ ಸಮ್ಮೇಳನಾಧ್ಯಕ್ಷೆ ಕು.ಹೇಮಾ ಬಣಕಾರ್ ಆಂಗ್ಲ ಮಾಧ್ಯಮ ವಿದ್ಯಾರ್ಥಿಯಾಗಿ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದಾರೆ. ಉತ್ತಮ ವಾಗ್ಮಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ. ಸೂಕ್ತ ಪ್ರೋತ್ಸಾಹದಿಂದ ಪ್ರತಿಭೆ ಸಾಹಿತ್ಯಲೋಕದಲ್ಲಿ ಗುರುತಿಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.

ಕಸಾಪ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಕನ್ನಡ ಭಾಷೆ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಬೆಳೆಸಬೇಕಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುವ ದಿಸೆಯಲ್ಲಿ ಮಕ್ಕಳನ್ನು ಸಿದ್ಧಪಡಿಸುವಲ್ಲಿ ಮಕ್ಕಳ ಸಮ್ಮೇಳನ ಸಹಕಾರಿಯಾಗಲಿದೆ. ಈ ದಿಸೆಯಲ್ಲಿ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಮಕ್ಕಳು ಪಾಲ್ಗೊಳ್ಳಲು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕಾರ್ಯದರ್ಶಿ ಸತ್ಯನಾರಾಯಣ, ಪ್ರಾಚಾರ್ಯ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

- - - -2ಕೆಎಸ್. ಕೆಪಿ2:

ಶಿಕಾರಿಪುರ ತಾಲೂಕು 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹುಚ್ರಾಯಪ್ಪ ಬಿಡುಗಡೆಗೊಳಿಸಿದರು.

Share this article