ಮಗುವಿಗೆ ಜನ್ಮ ನೀಡಿದ 9ನೇ ಕ್ಲಾಸ್‌ ಹಾಸ್ಟೆಲ್‌ ವಿದ್ಯಾರ್ಥಿನಿ!

KannadaprabhaNewsNetwork | Updated : Jan 11 2024, 12:01 PM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಟ್ಟಣದಲ್ಲಿ 9ನೇ ತರಗತಿಯ ಬಾಲಕಿಯೊಬ್ಬಳು ಗಂಡುಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆಕೆ ಉಳಿದುಕೊಂಡಿದ್ದ ಮಧುಗಿರಿಯ ಸರ್ಕಾರಿ ಹಾಸ್ಟೆಲ್‌ ವಾರ್ಡನ್‌ರನ್ನು ಅಮಾನತು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. 

ಬಾಲಕಿ ಗರ್ಭಿಣಿ ಎಂಬುದು ಹೆರಿಗೆಯಾಗುವವರೆಗೂ ಗೊತ್ತಿರಲಿಲ್ಲ ಎನ್ನಲಾಗಿದ್ದು, ಈ ಸಂಬಂಧ ಕರ್ತವ್ಯ ಲೋಪದ ಮೇರೆಗೆ ಆಕೆ ಉಳಿದುಕೊಂಡಿದ್ದ ತುಮಕೂರು ಜಿಲ್ಲೆಯ ಮಧುಗಿರಿಯ ಸರ್ಕಾರಿ ಹಾಸ್ಟೆಲ್‌ನ ವಾರ್ಡನ್‌ರನ್ನು ಅಮಾನತು ಮಾಡಲಾಗಿದೆ.

ಬಾಗೇಪಲ್ಲಿ ಮೂಲದ ಬಡ ಕುಟುಂಬದ ಈ ಹದಿನಾಲ್ಕು ವರ್ಷದ ಬಾಲಕಿ ತುಮಕೂರು ಜಿಲ್ಲೆಯ ಮಧುಗಿರಿಯ ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದಳು. 

ಮೂರು ದಿನಗಳ ಹಿಂದಷ್ಟೇ ಹೊಟ್ಟೆ ನೋವೆಂದು ಅಂಗನವಾಡಿ ಶಿಕ್ಷಕಿಯೂ ಆಗಿರುವ ತನ್ನ ತಾಯಿ ಜೊತೆಗೆ ಬಾಗೇಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಹೋಗಿ ಚುಚ್ಚುಮದ್ದು ಪಡೆದಿದ್ದಳು. 

ಇದಾದ ಕೆಲ ಸಮಯದ ನಂತರ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ವಾಪಸಾಗಿದ್ದು, ಈ ವೇಳೆ ಮತ್ತೊಂದು ಇಂಜೆಕ್ಷನ್ ನೀಡಲಾಗಿತ್ತು. ನಂತರ ಸ್ಕ್ಯಾನಿಂಗ್‌ ಕೂಡ ಮಾಡಲಾಗಿತ್ತು. ಇದಾದ ಕೆಲ ಸಮಯದಲ್ಲೇ ಬಾಲಕಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಜನಿಸಿದ ಮಗು 2.2 ಕೆ.ಜಿ. ತೂಕ ಇದೆ ಎಂದು ಹೇಳಲಾಗಿದೆ.

ಹೆರಿಗೆ ನಂತರ ಆಸ್ಪತ್ರೆ ಸಿಬ್ಬಂದಿ ಮಾಹಿತಿ ಕಲೆ ಹಾಕಿದಾಗ ಆಕೆ ಅಪ್ರಾಪ್ತೆ ಹಾಗೂ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಎಂಬುದು ಬಯಲಾಗಿದೆ. ನಂತರ ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿರುವ ಸಿಬ್ಬಂದಿ, ಈ ಕುರಿತು ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕಿ ಮತ್ತು ಮಗು ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರಿಗೂ ಗೊಂದಲ: ಬಾಗೇಪಲ್ಲಿ ಪೊಲೀಸರು ಈ ಕುರಿತು ಪೋಕ್ಸೋ ಕೇಸ್‌ ದಾಖಲಿಸಿಕೊಂಡಿದ್ದು, ಬಾಲಕಿ ಗರ್ಭಿಣಿಯಾಗಲು ಕಾರಣರಾದವರ ಪತ್ತೆಗಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. 

ಬಾಲಕಿಯು ಪೊಲೀಸರಿಗೆ ನೀಡಿರುವ ಒಂದು ಹೇಳಿಕೆಯಲ್ಲಿ ತನಗಿಂತ ಎರಡು ವರ್ಷದ ಹಿರಿಯ ವಿದ್ಯಾರ್ಥಿಯ ಹೆಸರು ಹೇಳಿದ್ದು, ಆತ ಈಗ ಶಾಲೆ ತೊರೆದಿದ್ದಾನೆ ಎಂದು ತಿಳಿದುಬಂದಿದೆ. 

ಮತ್ತೊಂದು ಹೇಳಿಕೆಯಲ್ಲಿ ಬೇರೊಬ್ಬರ ಹೆಸರು ಹೇಳಿರುವುದು ಗೊಂದಲ ಮೂಡಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮನೋವೈದ್ಯರ ಮೂಲಕ ಬಾಲಕಿಗೆ ಕೌನ್ಸೆಲಿಂಗ್‌ ಮಾಡಿಸಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿಸಿವೆ.

ಹಾಸ್ಟೆಲ್‌ಗೆ ಅಧಿಕಾರಿಗಳ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ಬಾಲಕಿ ಉಳಿದುಕೊಂಡಿದ್ದ ತುಮಕೂರು ಜಿಲ್ಲೆಯ ಮಧುಗಿರಿಯ ಹಾಸ್ಟಲ್‌ಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್‌.ಕೃಷ್ಣಪ್ಪ ಮತ್ತು ಸಹಾಯಕ ನಿರ್ದೇಶಕ ವಿ.ಎಸ್‌.ಶಿವಣ್ಣ ಬೇಟಿ ನೀಡಿ ಪರಿಶೀಲಿಸಿದರು. 

ಈ ಸಂಬಂಧ ಕೃಷ್ಣಪ್ಪ ಅವರು ನೀಡಿದ ವರದಿ ಆಧರಿಸಿ ಕರ್ತವ್ಯಲೋಪ, ನಿರ್ಲಕ್ಷ್ಯದ ಆರೋಪದಡಿ ಹಾಸ್ಟೆಲ್‌ನ ವಾರ್ಡನ್‌ ಜಿ.ನಿವೇದಿತಾ ಅವರನ್ನು ಅಮಾನತು ಮಾಡಿ ಜಿ.ಪಂ.ಸಿಇಓ ಜಿ.ಪ್ರಭು ಆದೇಶಿಸಿದ್ದಾರೆ.

ಹೆರಿಗೆಯವರೆಗೂ ಹೇಗೆ ತಿಳಿಯಲಿಲ್ಲ?
ಹೆರಿಗೆ ಆಗುವವರೆಗೂ ಬಾಲಕಿ ಗರ್ಭಿಣಿ ಎಂಬುದು ಯಾರ ಅರಿವಿಗೂ ಬಾರದಿರುವುದು ಅಚ್ಚರಿ ಮೂಡಿಸಿದೆ. ಪೋಷಕರಾಗಲಿ, ಹಾಸ್ಟೆಲ್‌ ಮೇಲ್ವಿಚಾರಕರಾಗಲಿ, ಶಾಲಾ ಶಿಕ್ಷಕರಾಗಲಿ ದೇಹದಲ್ಲಾಗುತ್ತಿದ್ದ ಬದಲಾವಣೆ ಗಮನಿಸದೇ ಹೋಗಿದ್ದು ಚರ್ಚೆಗೆ ಕಾರಣವಾಗಿದೆ.

Share this article