;Resize=(412,232))
ಸಂಪತ್ ತರೀಕೆರೆ
ಬೆಂಗಳೂರು : ಕಡತದಲ್ಲೇ ಕಮರಿ ಹೋಗಿದ್ದ ಡಿಜಿಟಲ್ ಆತ್ಮಕಥೆ ಸಾಕ್ಷ್ಯಚಿತ್ರ ಹೊಂದುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾನಪದ ಕಲಾವಿದರ ಕನಸು ನನಸಾಗಲಿದ್ದು, ದಶಕದ ನಂತರ ಕರ್ನಾಟಕ ಜಾನಪದ ಅಕಾಡೆಮಿ ಸಾಕ್ಷ್ಯಚಿತ್ರ ನಿರ್ಮಾಣ ಯೋಜನೆಗೆ ಮರುಜೀವ ನೀಡಲು ಮುಂದಾಗಿದೆ.
ಸುಮಾರು 2.50 ಕೋಟಿ ರು.ವೆಚ್ಚದಲ್ಲಿ ಬೆಂಗಳೂರು, ದಾವಣಗೆರೆ, ಹಾಸನ, ಉತ್ತರ ಕನ್ನಡ, ವಿಜಯಪುರ, ಶಿವಮೊಗ್ಗ, ಚಾಮರಾಜನಗರ ಸೇರಿ ರಾಜ್ಯದ ವಿವಿಧೆಡೆ ಪರಿಶಿಷ್ಟ ಜಾತಿಯ 45ಕ್ಕೂ ಹೆಚ್ಚು ಜಾನಪದ ಕಲಾವಿದರು ಮತ್ತು 70ಕ್ಕೂ ಅಧಿಕ ಪರಿಶಿಷ್ಟ ಪಂಗಡದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಿಸಲು ಯೋಜಿಸಲಾಗಿದೆ. ಈ ಸಂಬಂಧ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಅಕಾಡೆಮಿ ಹಂತದಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿ ಸಭೆ ಕೈಗೊಂಡು ಸರ್ಕಾರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಟೆಂಡರ್ ಕರೆಯಲು ಪ್ರಸ್ತಾವನೆ ಕಳುಹಿಸಿಕೊಟ್ಟಿದೆ.
ರು.2.50 ಕೋಟಿ ವಿಶೇಷ ಅನುದಾನ:
2015-16ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಕರ್ನಾಟಕ ಜಾನಪದ ಅಕಾಡೆಮಿಗೆ 2.50 ಕೋಟಿ ರು. ವಿಶೇಷ ಅನುದಾನ ಮೀಸಲು ಇಡಲಾಗಿತ್ತು. ಈ ಪೈಕಿ ಪರಿಶಿಷ್ಟ ಜಾತಿಯ ಜಾನಪದ ಕಲಾವಿದರ ಡಿಜಿಟಲ್ ಆತ್ಮಕಥೆಗೆ ಒಂದು ಕೋಟಿ ರು. ಮತ್ತು ಪರಿಶಿಷ್ಟ ಪಂಗಡದ ಜಾನಪದ ಕಲಾವಿದರ ಡಿಜಿಟಲ್ ಆತ್ಮಕಥೆಗೆ 1.50 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು. ಆದರೆ, ಈವರೆಗೂ ಜಾನಪದ ಕಲಾವಿದರ ಸಾಕಷ್ಯಚಿತ್ರ ನಿರ್ಮಾಣ ಯೋಜನೆ ಅನುಷ್ಠಾನಗೊಂಡಿರಲಿಲ್ಲ.
ಕಂಸಾಳೆ, ಗೊರವರ ಕುಣಿತ, ಡೊಳ್ಳುಕುಣಿತ, ಪೂಜಾ ಕುಣಿತ, ತಮಟೆವಾದನ, ಪಟ ಕುಣಿತ, ವೀರಗಾಸೆ, ಸುಗ್ಗಿಕುಣಿತ, ಹುಲಿವೇಷ, ಬೀಸು ಕಂಸಾಳೆ ಸೇರಿ ಜಾನಪದ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ 24 ಮಂದಿ ಪರಿಶಿಷ್ಟ ಜಾತಿ ಮತ್ತು 37 ಮಂದಿ ಪರಿಶಿಷ್ಟ ಪಂಗಡದ ಕಲಾವಿದರ ಪಟ್ಟಿಯನ್ನು ಸಾಕ್ಷ್ಯಚಿತ್ರಕ್ಕಾಗಿ ಸಿದ್ಧಪಡಿಸಲಾಗಿತ್ತು. ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಾಲ್ಕು ಸಭೆಗಳು ನಡೆದಿದ್ದವು. ಸಭೆಯಲ್ಲಿ ತೀರ್ಮಾನಿಸಿ, ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ 4ಜಿ ರಿಯಾಯತಿಗಾಗಿ ಸರ್ಕಾರಕ್ಕೆ ಪತ್ರವನ್ನೂ ಈ ಹಿಂದೆಯೇ ಬರೆಯಲಾಗಿತ್ತು. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ.
ಪ್ರತಿ ಕಲಾವಿದರ ಕುರಿತು ಒಂದು ಗಂಟೆಗಳ ಚಿತ್ರೀಕರಣ ನಡೆಸಿ ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರಿಂದಲೂ ಮಾಹಿತಿ ಕಲೆ ಹಾಕಬೇಕು. ಜೊತೆಗೆ ಸಾಕ್ಷ್ಯಾಚಿತ್ರವನ್ನು ಅರ್ಧ ಗಂಟೆಯ ಎರಡು ಕಂತುಗಳಾಗಿ ಹೊರ ತರಲು ಯೋಜಿಸಲಾಗಿತ್ತು. ಇದರಿಂದ ಕಲಾವಿದರು ಬಳಸಿದ ವಸ್ತ್ರಗಳು, ವಾದ್ಯಗಳು, ಜನಪದ ಹಾಡಿನ ಶೈಲಿ ಪುನಃಶ್ಚೇತನಕ್ಕೆ ಸಹಕಾರಿಯಾಗಲಿದೆ. ಜೊತೆಗೆ ಯುವ ಕಲಾವಿದರಿಗೂ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಈವರೆಗೆ ಸರ್ಕಾರದಿಂದ ಯಾವುದೇ ಆದೇಶ ಬಾರದಿರುವ ಬಗ್ಗೆ ಕಲಾವಿದರು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ.
ಇದೀಗ ಗೊಲ್ಲಹಳ್ಳಿ ಶಿವಪ್ರಸಾದ್ ಅಧ್ಯಕ್ಷತೆಯಲ್ಲಿ ಮತ್ತೆ ಸಭೆ ನಡೆಸಿದ್ದು, ಈ ಹತ್ತು ವರ್ಷಗಳಲ್ಲಿ ಬದುಕುಳಿದ ಕಲಾವಿದರ ಮಾಹಿತಿ ಸಂಗ್ರಹಿಸಿ, ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪರಿಶಿಷ್ಟ ಜಾತಿಯ 45 ಕಲಾವಿದರ ಸಾಕ್ಷ್ಯ ಚಿತ್ರಕ್ಕೆ ತಲಾ 1.50 ಲಕ್ಷ ರು.ನಂತೆ 67.50 ಲಕ್ಷ ರು. ಮತ್ತು 70 ಮಂದಿ ಪರಿಶಿಷ್ಟ ಪಂಗಡದ ಕಲಾವಿದರ ಸಾಕ್ಷ್ಯ ಚಿತ್ರಕ್ಕೆ ತಲಾ 1.50 ಲಕ್ಷ ರು.ನಂತೆ 1.05 ಕೋಟಿ ರು. ವೆಚ್ಚ ಮಾಡಿ ಯೋಜನೆ ಅನುಷ್ಠಾನಗೊಳಿಸುವ ಕುರಿತು ಯೋಜನೆ ರೂಪಿಸಲಾಗಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಯೋಜನೆಯ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಜಾನಪದ ಕಲಾವಿದರ ಡಿಜಿಟಲ್ ಆತ್ಮಕಥೆಯ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯ ಆರಂಭಿಸುವ ಯೋಚನೆ ಇದೆ. ಈಗಾಗಲೇ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಅನುಮತಿ ನೀಡಿದರೆ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಶುರು ಮಾಡುತ್ತೇವೆ.
- ಗೊಲ್ಲಹಳ್ಳಿ ಶಿವಪ್ರಸಾದ್, ಅಧ್ಯಕ್ಷ, ಕರ್ನಾಟಕ ಜಾನಪದ ಅಕಾಡೆಮಿ.